ಬೆಂಗಳೂರು: ವಿವಾಹಿತೆಯನ್ನು ಮದುವೆಯಾಗುವಂತೆ ಪೀಡಿಸಿ ಆಕೆ ಒಪ್ಪದಿದ್ದಕ್ಕೆ ಮನೆಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿಯನ್ನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರ್ಬಾಜ್ (24) ಬಂಧಿತ ಆರೋಪಿ. ಈತ ಕೆ.ಜಿ.ಹಳ್ಳಿಯಲ್ಲಿ ವಾಸವಾಗಿದ್ದು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ದೂರುದಾರ ವಿವಾಹಿತ ಮಹಿಳೆಗೆ ಆರೋಪಿ ಸಂಬಂಧಿಕನಾಗಿದ್ದ. ಮಹಿಳೆಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದು, ಗಂಡ ಶಿವಾಜಿನಗರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಸಾರಾಯಿಪಾಳ್ಯದಲ್ಲಿ ಮಹಿಳೆಯ ಕುಟುಂಬ ವಾಸವಾಗಿತ್ತು. ಈ ಮಧ್ಯೆ ಕೆಲ ತಿಂಗಳ ಹಿಂದೆ ಗಂಡನನ್ನ ತೊರೆದು ತನ್ನೊಂದಿಗೆ ಮದುವೆಯಾಗುವಂತೆ ಮಹಿಳೆಗೆ ಅರ್ಬಾಜ್ ಪೀಡಿಸಿದ್ದ.
ಈ ವಿಚಾರವನ್ನು ಆಕೆ ಗಂಡನಿಗೆ ತಿಳಿಸಿದ್ದಳು. ಹಿರಿಯರ ಸಮ್ಮುಖದಲ್ಲಿ ಮಹಿಳೆ ತಂಟೆಗೆ ಹೋಗದಂತೆ ಬೈದು ಬುದ್ದಿವಾದ ಹೇಳಿದ್ದರು. ಹೇಗಾದರೂ ಮದುವೆಯಾಗಬೇಕು ಎಂದು ನಿರ್ಧರಿಸಿದ ಅರ್ಬಾಜ್ ಮಹಿಳೆಗೆ ಕರೆ ಮಾಡಿ ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಿದ್ದ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಳು.
ಇದರಿಂದ ಕುಪಿತಗೊಂಡ ಆರೋಪಿ ಕಳೆದ ತಿಂಗಳು 11 ರಂದು ರಂಜಾನ್ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನ ಮನಗಂಡು ಆಕೆ ಮನೆಗೆ ಹೋಗಿ ಕಿಟಕಿ ತೆರೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಬೆಂಕಿ ತೀವ್ರತೆಗೆ ಕ್ಷಣಾರ್ಧದಲ್ಲಿ ಮನೆಯಲ್ಲಿದ್ದ ಪಿಠೋಪಕರಣಗಳು ಬೆಂಕಿಗೆ ಆಹುತಿಯಾಗಿದ್ದವು. ಘಟನೆ ಹಿಂದೆ ಅರ್ಬಾಜ್ ಕೈವಾಡ ಶಂಕೆ ಮೇರೆಗೆ ಮಹಿಳೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ಬೆಳಕಿಗೆ ಬಂದಿದೆ ಸದ್ಯ ಆರೋಪಿ ಅರ್ಬಾಜ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಕೈಕೊಟ್ಟ, ವಿಡಿಯೋ ಕಳಿಸಿ ಮದುವೆಯನ್ನೂ ಮುರಿದ: ಪ್ರೇಮಿ ಮನೆ ಮುಂದೆ ಯುವತಿ ಧರಣಿ