ಬೆಂಗಳೂರು: ರಾತ್ರಿ ಸಂಚರಿಸುವ ವೋಲ್ವೋ ಬಸ್‌ಗಳಲ್ಲಿ ಪ್ರಯಾಣಿಕರ ಬ್ಯಾಗ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇರೆ ಬೇರೆ ಭಾಗಗಳಿಂದ ಬೆಂಗಳೂರಿಗೆ ಬಸ್ ಹತ್ತುತ್ತಿದ್ದ ಆರೋಪಿ, ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿರುವ ಬೇರೆ ಪ್ರಯಾಣಿಕರ ಬ್ಯಾಗ್ ಸಮೇತ ಕೆಳಗಿಳಿಯುತ್ತಿದ್ದ. ಬಳಿಕ ಅದರಲ್ಲಿರುವ ಹಣ, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದ.
ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲು: ಕಳೆದ ನವೆಂಬರ್‌ನಲ್ಲಿ ಮಂಗಳೂರಿನಿಂದ ಬಸ್ ಹತ್ತಿದ್ದ ಆರೋಪಿ, ಬೆಂಗಳೂರಿನ ನವರಂಗ್ ನಿಲ್ದಾಣದ ಬಳಿ ಪ್ರಯಾಣಿಕರೊಬ್ಬರ ಬ್ಯಾಗ್ ಕದ್ದು ಇಳಿದಿದ್ದ. ಬಳಿಕ ಅದರಲ್ಲಿದ್ದ 300 ಗ್ರಾಂ ಚಿನ್ನಾಭರಣ ಅಡವಿಟ್ಟು ಹಣ ಪಡೆದುಕೊಂಡಿದ್ದನು. ಇತ್ತ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರು ಸುಬ್ರಮಣ್ಯ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದರು. ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
9 ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ : ಡಿಸೇಲ್ ಪೈಪ್ ಲೈನ್ ಕೊರೆದು 9ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ ಮಾಡಿರುವ ಘಟನೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ನಡೆದಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಪೈಪ್ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು ಮಾ.16ರ ರಾತ್ರಿಯಿಂದ ಮಾ.19ರ ರಾತ್ರಿಯ ಮಧ್ಯೆ ಅವಧಿಯಲ್ಲಿ ಕಳ್ಳರು ಡಿಸೇಲ್ ಪೈಪ್ ಲೈನ್ನಲ್ಲಿ ರಂಧ್ರ ಕೊರೆದು 2.5 ಇಂಚು ಹೆಚ್ ಡಿಪಿಇ ಪೈಪ್ ಮೂಲಕ ಅಂದಾಜು 12,000 ಲೀಟರ್ ಡಿಸೇಲ್ ಅನ್ನು ಕಳವು ಮಾಡಿದ್ದಾರೆ. ಕಳುವಾಗಿರುವ ಡಿಸೇಲ್ನ ಮೌಲ್ಯ ರೂ. 9,60,000 ಎಂದು ಪರಿಗಣಿಸಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು : ಘಟನೆ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 19/2024 ಕಲಂ: 427,285, 379 ಐ ಪಿ ಸಿ ಕಲಂ 15(2) ಪೆಟ್ರೊನೆಟ್ ಕಾಯ್ದೆ ಕಲಂ 3(2) ಪ್ರಿವೆನ್ಸೆನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಕೊಲೆ - MURDER IN HUBBALLI