ಬೆಂಗಳೂರು : ಗ್ರಾಹಕರ ಸೋಗಿನಲ್ಲಿ ಬಂದು ತುಪ್ಪ ಕದ್ದು ಪರಾರಿಯಾಗುವ ಕಳ್ಳರ ಗುಂಪೊಂದು ಬೆಂಗಳೂರಿನಲ್ಲಿ ಆ್ಯಕ್ಟಿವ್ ಆಗಿದೆ. ಕೆಜಿಗಟ್ಟಲೆ ತುಪ್ಪ ಖರೀದಿಸಿದ್ದ ಕಳ್ಳರು ಹಣ ಪಾವತಿಸದೇ ಎಸ್ಕೇಪ್ ಆದ ಘಟನೆ ಜೂನ್ 8ರಂದು ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಂಗಡಿಯಲ್ಲಿ ಒಬ್ಬರೇ ಸಿಬ್ಬಂದಿ ಇರುವಾಗ ಬಂದಿದ್ದ ಕಳ್ಳನೊಬ್ಬ 15 ಕೆಜಿ ತುಪ್ಪ ಕೇಳಿ ಪಡೆದಿದ್ದ. ಈ ವೇಳೆ ಮತ್ತೊಂದು ವಸ್ತು ಕೇಳಿದ್ದಾನೆ. ಆಗ ಅಂಗಡಿ ಸಿಬ್ಬಂದಿ ಅದನ್ನು ತರಲು ಹಿಂದಿರುಗಿದ್ದಾರೆ. ಈ ವೇಳೆ ತುಪ್ಪದ ಡಬ್ಬಿ ಸಮೇತ ಆರೋಪಿ ಅಂಗಡಿಯಿಂದ ಆಚೆ ಬಂದಿದ್ದ. ಅಷ್ಟರಲ್ಲಿ ಅಲರ್ಟ್ ಆದ ಅಂಗಡಿ ಸಿಬ್ಬಂದಿ ಚಾಲಾಕಿಯನ್ನು ಹಿಡಿಯಲು ಯತ್ನಿಸಿದ್ದಾರೆ.
ಆದರೆ ಹೊರಗಡೆ ಬೈಕಿನಲ್ಲಿ ಕಾದು ಕುಳಿತಿದ್ದ ಮತ್ತೋರ್ವ ಖದೀಮನೊಂದಿಗೆ ಕಳ್ಳ ಪರಾರಿಯಾಗಿದ್ದಾನೆ. ಒಂದು ತಿಂಗಳ ಹಿಂದೆ ಸಹ ಇದೇ ರೀತಿ 15 ಕೆ.ಜಿ ತುಪ್ಪ ಕದ್ದು ಕಳ್ಳರು ಪರಾರಿಯಾಗಿದ್ದ ಘಟನೆ ಕೆಂಗೇರಿಯ ಕೊಮ್ಮಘಟ್ಟದ ನಂದಿನಿ ಪಾರ್ಲರ್ನಲ್ಲಿ ನಡೆದಿತ್ತು.
ಹಾಡಹಗಲೇ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ : ಹಾಡಹಗಲೇ ಹಿರಿಯ ನಾಗರಿಕರೊಬ್ಬರನ್ನ ಬೆದರಿಸಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಪುಲಿಕೇಶಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಜಬಿ (22) ಹಾಗೂ ರೆಯಾನ್ (20) ಬಂಧಿತ ಆರೋಪಿಗಳು. ಬಂಧಿತರಿಂದ ರಾಬರಿ ಮಾಡಿದ್ದ ವಸ್ತುಗಳು, 60 ಸಾವಿರ ರೂ. ಬೆಲೆ ಬಾಳುವ 1 ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
![Accused](https://etvbharatimages.akamaized.net/etvbharat/prod-images/09-06-2024/kn-bng-03-robbers-arrest-7211560_09062024111036_0906f_1717911636_401.jpg)
ಮೇ 22ರಂದು ಫ್ರೇಜರ್ ಟೌನ್‌ನ ಸೆಂಟ್ರಲ್ ಸ್ಟ್ರೀಟ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು ಹಿರಿಯ ನಾಗರಿಕರೊಬ್ಬರನ್ನ ಅಡ್ಡಗಟ್ಟಿದ್ದರು. ಬಳಿಕ ಅವರನ್ನ ಬೆದರಿಸಿ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದರು. ಘಟನೆಯ ಕುರಿತು ಪುಲಿಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಇಬ್ಬರೂ ಆರೋಪಿಗಳನ್ನ ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಮೊಹಮ್ಮದ್ ಜಬಿ ವಿರುದ್ಧ ನಗರದ ಕಮರ್ಷಿಯಲ್ ಸ್ಟ್ರೀಟ್, ಹೆಚ್‌ಎಸ್‌ಆರ್ ಲೇಔಟ್, ಹೆಬ್ಬಾಳ, ಕೆ. ಆರ್ ಪುರಂ, ಸದಾಶಿವನಗರ ಪೊಲೀಸ್ ಠಾಣೆಗಳಲ್ಲಿ ಕಳವು ಮತ್ತು ರಾಬರಿ ಪ್ರಕರಣಗಳು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣಗಳಿವೆ. ಅವಲಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಕಳವು ಮತ್ತು ರಾಬರಿ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಹೊರ ಬಂದಿದ್ದ. ಮತ್ತೋರ್ವ ಆರೋಪಿ ರೆಯಾನ್ ವಿರುದ್ಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಇದನ್ನೂ ಓದಿ : ದೇವರ ಬೆಳ್ಳಿ ಮುಖವಾಡ ಹೊತ್ತೊಯ್ದ ಖದೀಮರು; ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಮುಸುಕುದಾರಿಗಳ ಕೃತ್ಯ! - God silver mask stolen