ಚಾಮರಾಜನಗರ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆ ದುರ್ಬಳಕೆ ಆಗಿರುವುದು ಭಾನುವಾರ ಬೆಳಕಿಗೆ ಬಂದಿದೆ. ಮೈಸೂರಿನಿಂದ- ಚಾಮರಾಜನಗರಕ್ಕೆ ಬರುತ್ತಿದ್ದ ಬಸ್ನಲ್ಲಿ ಯುವಕರಿಂದ ಹಣ ಪಡೆದು ಶಕ್ತಿ ಯೋಜನೆ ಟಿಕೆಟ್ ಅನ್ನು ಕೊಟ್ಟಿದ್ದಾರೆ ಎಂದು ನಿರ್ವಾಹಕ ರವಿಕುಮಾರ್ ಎಂಬವರ ವಿರುದ್ಧ ಆರೋಪ ಕೇಳಿ ಬಂದಿದೆ.
ಬೇಡರಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಸವರಾಜ್ ಮತ್ತಿತ್ತರ ಸ್ನೇಹಿತರ ಚಾಮರಾಜನಗರಕ್ಕೆ ಬರಲು ಹಣ ಕೊಟ್ಟು ಟಿಕೆಟ್ ಪಡೆದ ವೇಳೆ ಶಕ್ತಿ ಯೋಜನೆ ಟಿಕೆಟ್ ಕೊಟ್ಟಿದ್ದಾರೆ. ಬೇರೆ ಸಹ ಪ್ರಯಾಣಿಕರಿಗೂ ಕಂಡಕ್ಟರ್ ಟಿಕೆಟ್ ಕೊಟ್ಟು ಯಾಮಾರಿಸಿದ್ದು, ಪ್ರಶ್ನಿಸಿದ್ದಕ್ಕೆ ಅವಾಜ್ ಕೂಡ ಹಾಕಿದ್ದಾರೆ. ಕಂಡಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಟಿಕೆಟ್ ಸಮೇತ ವಿದ್ಯಾರ್ಥಿಗಳು ದೂರು ಕೊಟ್ಟಿದ್ದಾರೆ. ದೂರು ಪಡೆದಿರುವ ಚಾಮರಾಜನಗರ ಡಿಪೋ ಮ್ಯಾನೇಜರ್ ಕ್ರಮ ವಹಿಸುವ ಭರವಸೆ ಕೊಟ್ಟಿದ್ದಾರೆ.
"ನಿರ್ವಾಹಕ ರವಿಕುಮಾರ್ ಎಂಬವರ ವಿರುದ್ಧ ವಿದ್ಯಾರ್ಥಿಗಳು ದೂರು ಕೊಟ್ಟಿದ್ದಾರೆ. ಸೋಮವಾರದಂದು ಮೇಲಾಧಿಕಾರಿಗಳ ಗಮನಕ್ಕೆ ತಂದು, ಸತ್ಯಾಸತ್ಯತೆ ಪರಿಶೀಲಿಸಿ, ನಿರ್ವಾಹಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಚಾಮರಾಜನಗರ ಡಿಪೋ ಮ್ಯಾನೇಜರ್ ಕುಮಾರ್ ನಾಯ್ಕ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಜನರ ಮನೆ ಬಳಿಗೆ ಆರೋಗ್ಯ ಸೇವೆ ಒದಗಿಸುವ ಗೃಹ ಆರೋಗ್ಯ ಯೋಜನೆಗೆ ಚಾಲನೆ: ಏನಿದು ಯೋಜನೆ?