ಬೆಂಗಳೂರು : ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯಾಗಲಿದೆ ಎಂದು ಭಾವಿಸಿ ಪ್ರಿಯತಮೆಯ ಮೂರು ವರ್ಷದ ಕಂದಮ್ಮನನ್ನ ಕೊಲೆ ಮಾಡಿದ ಆರೋಪದಡಿ ಪ್ರಿಯಕರನನ್ನ ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅಶ್ವಿನ್ (3) ಕೊಲೆಯಾದ ನತದೃಷ್ಟ ಮಗು. ಮಗುವಿನ ತಾಯಿ ರಮ್ಯಾ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಿಯಕರ ಮೈಕೆಲ್ ರಾಜ್ನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಅವಿವಾಹಿತನಾಗಿದ್ದ ಆರೋಪಿ ಬೊಮ್ಮನಹಳ್ಳಿಯ ವಿರಾಟ್ ನಗರದಲ್ಲಿ ವಾಸವಾಗಿದ್ದು, ಜೀವನಕ್ಕಾಗಿ ಗ್ಯಾರೇಜ್ ಅಂಗಡಿ ಇಟ್ಟುಕೊಂಡಿದ್ದ. ಇದೇ ಏರಿಯಾ ಸಮೀಪದಲ್ಲಿ ರಮ್ಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಈಕೆಗೆ ಆರು ವರ್ಷಗಳ ಹಿಂದೆ ಅಕ್ಕನ ಗಂಡನ ಜೊತೆ ಪ್ರೇಮ ವಿವಾಹವಾಗಿತ್ತು. ಒಂದು ವರ್ಷದ ಹಿಂದೆ ಇಬ್ಬರ ನಡುವೆ ವೈಮನಸು ಉಂಟಾಗಿದ್ದರಿಂದ ಗಂಡನಿಂದ ರಮ್ಯಾ ದೂರವಾಗಿದ್ದರು.
ಈ ವೇಳೆ, ಆರೋಪಿ ಮೈಕೆಲ್ ರಾಜ್ನ ಪರಿಚಯವಾಗಿದೆ. ಕ್ರಮೇಣ ಇಬ್ಬರ ಸಂಬಂಧ ಆತ್ಮೀಯತೆಗೆ ತಿರುಗಿತ್ತು. ಕಳೆದ ಆರೇಳು ತಿಂಗಳಿಂದ ರಮ್ಯಾಳ ಮನೆಗೆ ಆರೋಪಿ ಬಂದು ಹೋಗುತ್ತಿದ್ದ. ಜುಲೈ 6ರಂದು ಮನೆಗೆ ಬಂದಿದ್ದಾಗ ಮನೆಯಲ್ಲಿದ್ದ ಅಶ್ವಿನ್ನನ್ನ ನೋಡಿ ಕೋಪಗೊಂಡಿದ್ದ. ತಮ್ಮಿಬ್ಬರ ಸಂಬಂಧಕ್ಕೆ ಮಗು ಅಡ್ಡಿಯಾಗಲಿದೆ ಎಂದು ಭಾವಿಸಿ ಕೆನ್ನೆಗೆ ಹೊಡೆದಿದ್ದಾನೆ. ನಂತರ ಬಾತ್ ರೂಮ್ನ ಗೋಡೆಗೆ ಮಗುವಿನ ತಲೆ ಗುದ್ದಿಸಿದ್ದರಿಂದ ಊತ ಕಂಡುಬಂದಿತ್ತು. ಇದನ್ನ ರಮ್ಯಳಿಗೆ ಹೇಳದೆ ಆರೋಪಿ ಮಾರೆಮಾಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ಮೇಲೆ ಹಲ್ಲೆ ಆಗಿರುವ ವಿಷಯ ತಾಯಿಗೆ ತಿಳಿದಿರಲಿಲ್ಲ. ಅದೇ ದಿನ ರಾತ್ರಿ ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ ಆಸ್ಪತ್ರೆಗೆ ಕರೆದೊಯ್ದರೂ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಗು ಕೀಟಲೆ ಮಾಡುತ್ತೆ ಅಂತಾ ಹೊಡೆಯುತ್ತಿದ್ದ ಆರೋಪಿ, ಮಹಿಳೆ ಮನೆಗೆ ಆಗಾಗ ಬರುತ್ತಿದ್ದಾಗ ಮಗುವಿನ ಮೇಲೆ ಹಗೆತನ ಸಾಧಿಸುತ್ತಿದ್ದ. ಅಶ್ವಿನ್ ತರಲೆ ಮಾಡುತ್ತಾನೆ ಎಂಬ ಸಣ್ಣ- ಪುಟ್ಟ ಕಾರಣಕ್ಕಾಗಿ ಹೊಡೆಯುತ್ತಿದ್ದ. ತಮ್ಮಿಬ್ಬರ ಖಾಸಗಿ ಕ್ಷಣಗಳಿಗೆ ಮಗು ಅಡ್ಡಿಯಾಗುತ್ತೆ ಎಂದು ಭಾವಿಸಿ ತಾಯಿ ಮನೆಯಲ್ಲಿ ಇಲ್ಲದಿರುವಾಗ ಕೆನ್ನೆಗೆ ಹೊಡೆದಿದ್ದ. ಗೋಡೆಗೆ ತಲೆ ಗುದ್ದಿಸಿದ್ದ ಪರಿಣಾಮ ಕಳೆದ ಸೋಮವಾರ ರಾತ್ರಿ ಮಗು ಸಾವನ್ನಪ್ಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಅನೈತಿಕ ಸಂಬಂಧ ಶಂಕೆ: ಕುಪಿತ ತಂದೆಯ ಕೋಪಕ್ಕೆ 4 ವರ್ಷದ ಪುತ್ರ ಬಲಿ, ಪತ್ನಿ ಗಂಭೀರ