ಬೆಂಗಳೂರು: ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರನ್ನ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ್ದ ಆರೋಪಿಯನ್ನು ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ಮೂಲದ ಮುನೇಗೌಡ(50) ಬಂಧಿತ ಆರೋಪಿ. ಫೆಬ್ರವರಿ 8ರಂದು ವಿಧಾನಸೌಧದಲ್ಲಿ ನಡೆದಿದ್ದ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದ ಮುನೇಗೌಡ, ಸಿಎಂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದ ವೇಳೆ ಆಕ್ರೋಶ ಹೊರಹಾಕಿದ್ದ. ಸಚಿವ ರಾಮಲಿಂಗಾ ರೆಡ್ಡಿಯವರನ್ನ ಅವಹೇಳನಕಾರಿ ಪದದಿಂದ ನಿಂದಿಸಿದ್ದ.
ಈ ವೇಳೆ ಆರೋಪಿಯನ್ನ ತಡೆಯಲು ಯತ್ನಿಸಿದ್ದ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ. ದೂರು ದಾಖಲಿಸಿಕೊಂಡಿದ್ದ ವಿಧಾನಸೌಧ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ "ಡಿಎಲ್ ವಿಚಾರವಾಗಿ ಕೋಪದಲ್ಲಿ ಮಾತನಾಡಿದ್ದೆ, ನನ್ನಿಂದ ತಪ್ಪಾಗಿದೆ'' ಎಂದು ಮುನೇಗೌಡ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಮಹದಾಯಿ, ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಖಾಲಿ ಬಿಂದಿಗೆ ಹಿಡಿದು ವಾಟಾಳ್ ಪ್ರತಿಭಟನೆ