ಬೆಂಗಳೂರು: ಉಪ ಮುಖ್ಯಮಂತ್ರಿ ಹಾಗೂ ಸಚಿವರ ಅಪ್ತ ಕಾರ್ಯದರ್ಶಿಗಳ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ನಗರದ ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ಧಾರೆ.
ರಘುನಾಥ್ (35) ಬಂಧಿತ ಆರೋಪಿ. ತುಮಕೂರು ಮೂಲದ ಈತ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯದರ್ಶಿಗಳಿಗೆ ಆಪ್ತ ಎಂದು ಹೇಳಿಕೊಂಡು ವಂಚಿಸಿದ್ದಾನೆ. ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಕರೆ ಮಾಡಿ ವರ್ಗ ಮಾಡಿಸಿಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಬಂಧಿತನಾಗಿದ್ದ ಆರೋಪಿ: ಎಂಬಿಎ ವ್ಯಾಸಂಗ ಮಾಡಿಕೊಂಡಿದ್ದ ರಘುನಾಥ್ ಕೆಲಸಕ್ಕೆ ಹೋಗದೆ ಓಡಾಡುತ್ತಿದ್ದ. ಸರ್ಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳ ವರ್ಗಾವಣೆಯಾಗುವ ಬಗ್ಗೆ ತಿಳಿದುಕೊಳ್ಳುತ್ತಿದ್ದ. ಅವರ ಮೊಬೈಲ್ ನಂಬರ್ ಸಂಗ್ರಹಿಸಿಕೊಂಡು ಕರೆ ಮಾಡಿ, ಸಚಿವರ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಸರ್ಕಾರಿ ನೌಕರರಿಗೆ ವಂಚಿಸುತ್ತಿದ್ದ. ವಂಚನೆ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿ ಜಾಮೀನು ಪಡೆದು ಹೊರಬಂದು ಮತ್ತೆ ವಂಚನೆ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಪ್ತ ಕಾರ್ಯದರ್ಶಿಯಿಂದ ದೂರು: ವಿಧಾನಸೌಧದಲ್ಲಿರುವ ಉಪಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಆಪ್ತಕಾರ್ಯದರ್ಶಿಗಳಿಗೆ ಆಪ್ತನಾಗಿದ್ದೇನೆ ಎಂದು ಸರ್ಕಾರಿ ಅಧಿಕಾರಿಗಳಿ ಆರೋಪಿ ಪರಿಚಯಿಸಿಕೊಳ್ಳುತ್ತಿದ್ದ. ವರ್ಗಾವಣೆ ಮಾಡಿಸಿಕೊಡುವುದಾಗಿ ಭರವಸೆ ನೀಡುತ್ತಿದ್ದ. ಇದಕ್ಕೆ ಇಂತಿಷ್ಟು ಪ್ರಮಾಣ ಹಣ ಖರ್ಚಾಗಲಿದೆ ಎಂದು ಸುಳ್ಳು ಹೇಳಿದ್ದ. ಈ ಸಂಬಂಧ ಡಿಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
2 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ 80 ಸಾವಿರ ವಸೂಲಿ: ಅದೇ ರೀತಿ ಕಳೆದ ತಿಂಗಳು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಸಹಾಯಕ ಹಾಗೂ ವಿಶೇಷಾಧಿಕಾರಿ ಎಂದು ಪರಿಚಯಿಸಿಕೊಂಡು ವರ್ಗಾವಣೆ ಮಾಡಿಸಿಕೊಡುವುದಾಗಿ ಕಾವ್ಯ ಎಂಬವರಿಗೆ ಆಮಿಷವೊಡ್ಡಿದ್ದ. ಇದಕ್ಕೆ 2 ಲಕ್ಷ ರೂ. ಹಣ ನೀಡುವಂತೆ ತಾಕೀತು ಮಾಡಿದ್ದ. ಬೆದರಿಕೆವೊಡ್ಡಿ 80 ಸಾವಿರ ರೂ.ಗಳನ್ನು ಆನ್ಲೈನ್ ಮೂಲಕ ಆರೋಪಿ ಪಡೆದುಕೊಂಡಿದ್ದ. ಈ ಸಂಬಂಧ ವಿಧಾನಸೌಧ ಪೊಲೀಸರು ಎರಡನೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಸತ್ತಂತೆ ನಟಿಸಿ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಯೋಗ ಶಿಕ್ಷಕಿ ಪ್ರಕರಣ: ಮಹಿಳೆ ಸೇರಿ 6 ಆರೋಪಿಗಳ ಬಂಧನ