ಬೆಂಗಳೂರು: ರೈಲು ಮಾರ್ಗದಲ್ಲಿ ತ್ರಿಪುರದಿಂದ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ರಾಜ್ಯ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ತ್ರಿಪುರದ ಅಗರ್ತಲಾದಿಂದ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ಟರ್ಮಿನಲ್‌ಗೆ ಬಂದಿಳಿದ ರೈಲಿನಲ್ಲಿ ಗಾಂಜಾ ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ತ್ರಿಪುರದ ಪಾಂಡಬ್ಪುರ ಮೂಲದ ದೀಪನ್ದಾಸ್ (20) ಬಂಧಿತ ಆರೋಪಿ. ಆತನಿಂದ 32.8 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ.
ಆರೋಪಿಯು ಅಗರ್ತಲಾ - ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಗುತ್ತಿಗೆ ಆಧಾರದಲ್ಲಿ ಬೆಡ್ ರೋಲರ್ ಕೆಲಸ ಮಾಡುತ್ತಿದ್ದ. ಪ್ರಕರಣದಲ್ಲಿ ತ್ರಿಪುರ ಮೂಲದ ಸುಮನ್ ಹಾಗೂ ಬೆಂಗಳೂರಿನಲ್ಲಿ ಗಾಂಜಾ ಆಮದು ಮಾಡಿಕೊಳ್ಳುತ್ತಿದ್ದ ಬಿಸ್ವಜಿತ್ ಎಂಬ ಆರೋಪಿಗಳು ನಾಪತ್ತೆಯಾಗಿದ್ದು, ಪತ್ತೆಕಾರ್ಯ ಮುಂದುವರೆದಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಜ್ಯ ರೈಲ್ವೆ ಎಸ್.ಪಿ. ಡಾ. ಸೌಮ್ಯಲತಾ .ಎಸ್.ಕೆ. ತಿಳಿಸಿದ್ದಾರೆ.