ಮಂಡ್ಯ: ನಿಂತಿದ್ದ ಕಂಟೈನರ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಡ್ಯ ಹೊರವಲಯದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಸ್ಯಾಂಜೋ ಆಸ್ಪತ್ರೆ ಬಳಿ ಇಂದು ಬೆಳಗ್ಗೆ ನಡೆಯಿತು.
ಕುಣಿಗಲ್-ಹೆಬ್ಬರು-ತುಮಕೂರು ನಡುವೆ ಸಂಚರಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಕಂಟೈನರ್ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿರುವುದರಿಂದ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಯಾಂಜೋ ಆಸ್ಪತ್ರೆ ಹಾಗೂ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತದ ದೃಶ್ಯ ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕುಣಿಗಲ್ನಿಂದ ಬೆಂಗಳೂರ - ಮೈಸೂರು ಹೆದ್ದಾರಿಯಲ್ಲಿ ಬಂದ ಬಸ್ ಸ್ಯಾಂಜೋ ಆಸ್ಪತ್ರೆಯ ಬಳಿ ಸರ್ವಿಸ್ ರಸ್ತೆಗೆ ತಿರುವು ತೆಗೆದುಕೊಳ್ಳುವಾಗ ರಸ್ತೆ ಬದಿ ನಿಂತಿದ್ದ ಕಂಟೈನರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪಲ್ಟಿಯಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಪಲ್ಟಿಯಾದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು ಹೊರ ಬರಲಾಗದೇ ಕಿಟಕಿಗಳಿಂದ ಹೊರಬಂದಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ, ತೆರವು ಕಾರ್ಯ ನಡೆಸಿದರು.
ಇದನ್ನೂ ಓದಿ: ದೇವರ ಉತ್ಸವದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಹೃದಯಾಘಾತ, ವ್ಯಕ್ತಿ ಸಾವು - Man Dies Of Heart Attack