ವಿಜಯಪುರ: ಜಿಲ್ಲೆಯ ತಿಕೋಟಾ ಸಮೀಪ ನಿನ್ನೆ (ಶನಿವಾರ) ತಡರಾತ್ರಿ ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯ ರತ್ನಾಪುರ ಕ್ರಾಸ್ ಬಳಿ ಅಪಘಾತ ನಡೆದಿದೆ. ತೊರವಿ ತಾಂಡಾ ನಿವಾಸಿಗಳಾದ ರಾಮು ರಾಠೋಡ್ ಹಾಗು ಕಿಟ್ಟು ಮೃತಪಟ್ಟಿದ್ದಾರೆ.
ಟ್ರಕ್ ಪಲ್ಟಿ: ತಂಪು ಪಾನೀಯ ತುಂಬಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ಸಾರವಾಡ ಬಳಿ ನಡೆದಿದೆ. ರಸ್ತೆಯಲ್ಲಿ ಬಿದ್ದ ಪಾನೀಯ ಬಾಟಲಿಗಳನ್ನು ದಾರಿಹೋಕರು, ಸ್ಥಳೀಯರು ತೆಗೆದುಕೊಂಡು ಹೋದರು.
ಟ್ರಕ್ ಅಡಿ ಸಿಲುಕಿದ್ದ ಚಾಲಕನನ್ನು ಸತತ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ಬಳಿಕ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಾನೀಯ ತುಂಬಿದ್ದ ಟ್ರಕ್ ಗೋವಾದಿಂದ ಹೈದರಾಬಾದ್ಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಪೆದೋರಿದ ಮಳೆರಾಯ: ಬಿರು ಬಿಸಿಲಿನಿಂದ ಕಂಗೆಟ್ಟು ಹೋಗಿದ್ದ ಜಿಲ್ಲೆಯ ಜನತೆಗೆ ಮಳೆರಾಯ ಕೃಪೆ ತೋರಿದ್ದಾನೆ. ಈಗಾಗಲೇ ಜಿಲ್ಲೆಯ ಕೆಲ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಾಗಿದೆ. ಹೂವಿನ ಹಿಪ್ಪರಗಿ ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಗಾಳಿಗೆ ವಿದ್ಯುತ್ ಕಂಬ ಹಾಗು ಮರಗಳು ನೆಲಕ್ಕುರುಳಿವೆ. ಮಳೆರಾಯನ ಆಗಮನದಿಂದ ರೈತರಲ್ಲಿ ಸಂತಸ ಮೂಡಿದ್ದು, ಬಿತ್ತನೆಗೆ ಅಣಿಯಾಗುತ್ತಿದ್ದಾರೆ.
ಸಿಕ್ಕಿಬಿದ್ದ ಅಂಗನವಾಡಿ ಶಿಕ್ಷಕಿ: ಮಕ್ಕಳ ಆಹಾರವನ್ನು ಕದ್ದು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ಅಂಗನವಾಡಿ ಶಿಕ್ಷಕಿಯೊಬ್ಬರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ನಡೆದಿದೆ. ಆರೋಪಿ ಶಿಕ್ಷಕಿ ಗೋಧಿ ರವಾ, ಮಕ್ಕಳಿಗೆ ಬಂದಿದ್ದ ಲಾಡು ಹಿಟ್ಟು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಮಾದೇವಿ ಶಿವಯ್ಯಮಠ ಆರೋಪಿ ಶಿಕ್ಷಕಿ. ''ಈ ಆಹಾರವನ್ನು ಸ್ವಚ್ಛ ಮಾಡಲು ಮನೆಗೆ ತೆಗೆದುಕೊಂಡು ಹೋಗುತ್ತಿದ್ದೆ'' ಎಂದು ಶಿಕ್ಷಕಿ ನೆರೆದಿದ್ದ ಗ್ರಾಮಸ್ಥರಿಗೆ ಸಬೂಬು ಹೇಳಿದ್ದಾರೆ. ಈ ವೇಳೆ, ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪರಿಸರ ಜಾಗೃತಿ: ತಾಳಿಕೋಟೆ ಪಟ್ಟಣದಲ್ಲಿ ಹಸಿರು ಸಂಪದ ಬಳಗವೆಂಬ ಸಮಾನಮನಸ್ಕ ಪರಿಸರಪ್ರಿಯರ ಸಂಘಟನೆ ಕಳೆದ ಆರೇಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಪರಿಸರದ ಕುರಿತು ಜಾಗೃತಿ ಮೂಡಿಸುವುದು, ಉದ್ಯಾನಗಳನ್ನು ಸ್ವಚ್ಛಗೊಳಿಸುವುದು, ಪಕ್ಷಿಗಳಿಗೆ ಗಿಡಗಳಲ್ಲಿ ಗೂಡುಗಳನ್ನು ತಯಾರಿಸುವುದು ಅಲ್ಲದೇ ಪಟ್ಟಣದಲ್ಲಿ ರಸ್ತೆಗಳ ಮತ್ತು ಇನ್ನಿತರ ಕಡೆಗಳ ಸಸಿಗಳನ್ನು ನೆಟ್ಟು ಪಾಲನೆ, ಪೋಷಣೆ ಮಾಡುವುದೂ ಸೇರಿದಂತೆ ತಾಳಿಕೋಟೆ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಸರೀಕರಣ ಹೆಚ್ಚಳದಲ್ಲಿ ಈ ಸಂಘಟನೆ ಸಕ್ರಿಯವಾಗಿ ತೊಡಗಿಕೊಂಡಿದೆ.
ಈ ಕಾರ್ಯದಲ್ಲಿ ಪಟ್ಟಣದ ನಿವಾಸಿಗಳು, ಹಿರಿಯರು, ಉದ್ಯಮಿಗಳು, ಸರ್ಕಾರಿ ನೌಕರರು, ಅಧಿಕಾರಿಗಳು, ಜನಪ್ರತಿನಿಧಿಗಳು ಕೈಜೋಡಿಸುತ್ತಾರೆ. ಇಂತಹ ಸಂಘಟನೆಯ ಏಳನೇಯ ವಾರ್ಷಿಕೋತ್ಸವ ಹಾಗು ವಿಶ್ವ ಪರಿಸರ ದಿನಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು (ಭಾನುವಾರ) ತಾಳಿಕೋಟೆ ಪಟ್ಟಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಹಸಿರು ಸಂಪದ ಬಳಗದ ಏಳನೇಯ ವಾರ್ಷಿಕೋತ್ಸವದ ಜೊತೆಗೆ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಮಾರ್ಗದರ್ಶನ ನೀಡಿದರು. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಎಲೆಮರೆ ಕಾಯಿಯಂತೆ ದುಡಿಯುತ್ತಿರುವ ಇಬ್ಬರು ಮಹನೀಯರನ್ನು ಸತ್ಕರಿಸುವ ನಿರ್ಣಯ ಕೈಗೊಳ್ಳಲಾಯಿತು.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ- ಎನ್.ರವಿಕುಮಾರ್ - Valmiki Corporation Scam