ಹುಬ್ಬಳ್ಳಿ: ಪ್ರಯಾಣಿಕರ ಬೇಡಿಕೆಯ ಮೇರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಹಾಗೂ ಮುಂಬೈ ನಡುವೆ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಪುನಾರಂಭಿಸಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದರು.
ಈ ಹಿಂದೆ ಹುಬ್ಬಳ್ಳಿ ಹಾಗೂ ಮುಂಬೈ ನಡುವೆ ಎಸಿ ಬಸ್ ಸೇವೆಯನ್ನು ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಳಿಸಲಾಗಿತ್ತು. ಸದರಿ ಬಸ್ ಸಂಚಾರವನ್ನು ಮತ್ತೆ ಆರಂಭಿಸುವಂತೆ ಸಾರ್ಜನಿಕರು ಒತ್ತಾಯಿಸಿದ್ದರು. ಗೌರಿ- ಗಣೇಶ ಹಬ್ಬ ಸಮೀಪಿಸುತ್ತಿರುವದರಿಂದ ಹುಬ್ಬಳ್ಳಿ ಹಾಗೂ ಮುಂಬೈ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಮುಂಬೈ ನಡುವೆ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಪುನರಾರಂಭಿಸಲಾಗಿದೆ.
ಮೊದಲ ಬಸ್ ಹುಬ್ಬಳ್ಳಿಯಿಂದ ಮುಂಬೈಗೆ ಸೆ. 2ರಂದು ಸೋಮವಾರ ಹೊರಟು, ಸೆ.3 ರಂದು ಮಂಗಳವಾರ ಹುಬ್ಬಳ್ಳಿಗೆ ವಾಪಸ್ ಬರಲಿದೆ.
ಬಸ್ ವೇಳಾಪಟ್ಟಿ: ಹುಬ್ಬಳ್ಳಿಯಿಂದ ಮುಂಬೈಗೆ ಹೊರಡುವ ಬಸ್ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ರಾತ್ರಿ 8:30ಕ್ಕೆ ಹೊರಡುತ್ತದೆ. ಧಾರವಾಡ ಹೊಸ ಬಸ್ ನಿಲ್ದಾಣ (9:30), ಬೆಳಗಾವಿ(10:30), ಕೊಲ್ಹಾಪುರ, ಪುಣೆ ಮಾರ್ಗವಾಗಿ ಮರುದಿನ ಬೆಳಗ್ಗೆ 8ಕ್ಕೆ ಮುಂಬೈ ಸೆಂಟ್ರಲ್ ಬಸ್ ನಿಲ್ದಾಣ ತಲುಪುತ್ತದೆ.
ಮುಂಬೈನಿಂದ ಹುಬ್ಬಳ್ಳಿಗೆ ಬರುವ ಬಸ್ ಸೆಂಟ್ರಲ್ ಬಸ್ ನಿಲ್ದಾಣದಿಂದ ರಾತ್ರಿ 8:30ಕ್ಕೆ ಹೊರಡುತ್ತದೆ. ಮರುದಿನ ಬೆಳಗ್ಗೆ ಬೆಳಗಾವಿಗೆ 6:30ಕ್ಕೆ, ಧಾರವಾಡ 7:50ಕ್ಕೆ ಹಾಗೂ ಹುಬ್ಬಳ್ಳಿಗೆ 8:30ಕ್ಕೆ ಆಗಮಿಸುತ್ತದೆ.
https://www.ksrtc.in ಅಥವಾ KSRTC Mobile App, ಗೋಕುಲ ರಸ್ತೆ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ ಹಾಗೂ ಮತ್ತಿತರ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.
ಒಂದೇ ಟಿಕೆಟ್ನಲ್ಲಿ ನಾಲ್ಕು ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಹೆಚ್. ರಾಮನಗೌಡರ ಮಾಹಿತಿ ನೀಡಿದರು.