ಬೆಂಗಳೂರು: ರಾಜ್ಯಾದ್ಯಂತ ಮುಖ್ಯವಾಗಿ ರಾಜಧಾನಿಯಲ್ಲಿ ಆಹಾರ ಸುರಕ್ಷತೆ ಪರಿಶೀಲನೆ ನಡೆಸುವ ಫುಡ್ ಸೇಫ್ಟಿ ಆಫೀಸರ್‌ಗಳು ಹಫ್ತಾ ವಸೂಲಿಗೆ ಇಳಿದಿದ್ದಾರೆ. ಇದೊಂದು ಸಾವಿರಾರು ಕೋಟಿ ರೂಪಾಯಿಯ ದಂಧೆಯಾಗಿ ಮಾರ್ಪಟ್ಟಿದೆ. ಆಹಾರದಲ್ಲಿ ರಾಸಾಯನಿಕಗಳು ಸಂಪೂರ್ಣ ನಿಷೇಧವಾಗಿದ್ದರೂ ಸಹ ಈಗಲೂ ಅನೇಕ ಉಪಹಾರ ಗೃಹಗಳಲ್ಲಿ ಕಲರ್ ಬಳಕೆ ಮಾಡುತ್ತಿರುವುದು ಬೆಂಗಳೂರನ್ನು ಒಂದು ಸುತ್ತು ಹೊಡೆದರೆ ಕಾಣಸಿಗುತ್ತದೆ. ಅದರಲ್ಲೂ ಕೆಳ ವರ್ಗಗಳು ವಾಸಿಸುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಬಡವರು, ಕೆಳ ಮಧ್ಯಮ ವರ್ಗದವರು ಹಾಗೂ ಕೆಲವರ್ಗದವರು ರೋಗಿಗಳಾಗುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಪ್ರಧಾನಕಾರ್ಯದರ್ಶಿ ಮೋಹನ್ ದಾಸರಿ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಆಹಾರ ಸುರಕ್ಷತೆ ಬಗ್ಗೆ ಬಿಬಿಎಂಪಿ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಕುರಿತು ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಬೀದಿ ಬೀದಿಗಳಲ್ಲಿ ಹೆಚ್ಚುತ್ತಿರುವ ಡಾಬಾ, ಹೋಟೆಲ್, ಕಬಾಬ್ ಅಂಗಡಿ, ಮಸಾಲಪುರಿ, ಬೇಲ್ಪುರಿ ಅಂಗಡಿಗಳು, ಜ್ಯೂಸ್ ಅಂಗಡಿಗಳು ಆಹಾರ ಸುರಕ್ಷತೆ ನಿಯಮಗಳನ್ನು ಪಾಲಿಸದೇ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ಆಹಾರ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾದ ಫುಡ್ ಸೇಫ್ಟಿ ಆಫೀಸರ್‌ಗಳು ಅಗತ್ಯ ಮಾದರಿಗಳನ್ನೇ ಸಂಗ್ರಹಿಸುತ್ತಿಲ್ಲ. ಮಾದರಿ ಆಹಾರದ ಮೇಲೆ ನಿಯಮಿತವಾಗಿ ಪರೀಕ್ಷೆಗಳು ನಡೆಯುತ್ತಿಲ್ಲ. ಇದನ್ನು ನಿರ್ವಹಿಸಬೇಕಾದ ಬಿಬಿಎಂಪಿ ಸಂಬಂಧವಿಲ್ಲದಂತಿದೆ. ನಗರದಲ್ಲಿ ಅವ್ಯಾಹತವಾಗಿ ಹೆಚ್ಚಿರುವ ಬೀದಿ ಬದಿ ಡಾಬಾ, ಹೋಟೆಲ್ಗಳು ಹೇಗೆ ಆಹಾರ ತಯಾರಿಸುತ್ತಿದ್ದಾರೆ. ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತಿಲ್ಲ. ಕೇವಲ ದೊಡ್ಡ ದೊಡ್ಡ ಹೋಟೆಲ್, ರೆಸ್ಟೋರೆಂಟ್ಗಳಿಗೆ ಹಫ್ತಾ ವಸೂಲಿಗಷ್ಟೇ ಹೋಗುತ್ತಾರೆ ಎಂದು ದೂರಿದರು.
ಎಫ್‌ಎಸ್ಒಗಳ ಮೇಲೆ ಬಿಬಿಎಂಪಿಗೆ ಹಿಡಿತ ಇಲ್ಲದಂತಾಗಿದೆ: ಪ್ರತಿಯೊಬ್ಬ ಎಫ್‌ಎಸ್‌ಒ ಪ್ರತಿ ತಿಂಗಳು ಕನಿಷ್ಠ 5 ಮಾದರಿಗಳನ್ನು ಬಿಬಿಎಂಪಿ ಆಹಾರ ಪರೀಕ್ಷಾ ಲ್ಯಾಬೋರೇಟರಿಗೆ ಕಳುಹಿಸಬೇಕು ಎಂಬ ನಿಯಮವಿದೆ. ಬೆಂಗಳೂರಿನಲ್ಲಿ ಸುಮಾರು 20,000 ಲೈಸೆನ್ಸ್ ಪಡೆದ ರೆಸ್ಟೋರೆಂಟ್‌ಗಳಿವೆ. ಲೆಕ್ಕವೇ ಸಿಗದಷ್ಟು ಅನಧಿಕೃತ ಹೋಟೆಲ್, ಡಾಬಾಗಳಿವೆ. ಆದರೆ ನಗರದ 198 ವಾರ್ಡ್‌ಗಳಲ್ಲಿ ಆಹಾರ ಸುರಕ್ಷತೆ ನಿರ್ವಹಣೆಗಾಗಿ ಕೇವಲ 19 ಎಫ್ಎಸ್ಒಗಳಿದ್ದಾರೆ. ಪ್ರತಿ 10 ವಾರ್ಡ್‌ಗೆ ಒಬ್ಬರಂತೆ ಎಫ್‌ಎಸ್‌ಒ ಹಾಗೂ ಪ್ರತಿ 50 ವಾರ್ಡ್‌ಗೆ ಓರ್ವ ಡಿಒ (ಡೆಸಿಗ್ನೇಟೆಡ್ ಆಫೀಸರ್) ಇದ್ದಾರೆ. ಕಳೆದ 5 ವರ್ಷಗಳಲ್ಲಿ ಮಾದರಿ ಸಂಗ್ರಹ ಪ್ರಮಾಣ ತುಂಬಾ ಕಡಿಮೆಯಾಗಿದೆ. ಎಫ್‌ಎಸ್ಒಗಳ ಮೇಲೆ ಬಿಬಿಎಂಪಿಗೆ ಹಿಡಿತ ಇಲ್ಲದಂತಾಗಿದೆ. ಇದು ಆಹಾರ ಸುರಕ್ಷತೆ ಬಗ್ಗೆ ಬಿಬಿಎಂಪಿಗೆ ಎಷ್ಟು ಕಾಳಜಿಯಿದೆ ಎಂಬುದನ್ನು ತೋರಿಸುತ್ತದೆ. ಆಹಾರ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಹಾರ ಮಾದರಿಗಳನ್ನು ಸಂಗ್ರಹಿಸಿ ಕಲುಷಿತ, ರಾಸಾಯನ ಮಿಶ್ರಿತ, ಕಳಪೆ ಆಹಾರ ಪೂರೈಕೆಯಾಗದಂತೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬೆಂಗಳೂರು: ಪ್ರವಾಹ ನಿಭಾಯಿಸಲು ತಂತ್ರಜ್ಞಾನದ ಬಳಕೆಗೆ ಮುಂದಾದ ಬಿಬಿಎಂಪಿ - BBMP