ಧಾರವಾಡ: ಟೈಲ್ಸ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಯುವಕನೋರ್ವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಮಣಕಿಲ್ಲಾ ಬಡಾವಣೆ ಹರೀಶ್ ಶಿಂಧೆ (30) ಮೃತ ಯುವಕನಾಗಿದ್ದಾನೆ.
ಸೋಮವಾರ ಸಂಜೆ ಮನೆಯಲ್ಲಿ ಹೇಳಿ ಹೊರಹೋಗಿದ್ದ ಹರೀಶ್ ಮಂಗಳವಾರ ತಾಲೂಕಿನ ಗೋವನಕೊಪ್ಪ ಬಳಿಯ ವಾಸುದೇವ ನಗರ ಬಡಾವಣೆಯ ರಸ್ತೆ ಬದಿಯ ಹೆಸರುಬೇಳೆ ಹೊಲದ ಪಕ್ಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಧಾರವಾಡ ತಾಲೂಕಿನ ಗೋವನಕೊಪ್ಪ ಬಳಿಯ ಕ್ರಾಸ್ವರೆಗೆ ಬೈಕ್ ಮೇಲೆ ಹೋಗಿದ್ದು, ಸ್ಕೂಟಿ ಪತ್ತೆಯಾಗಿದೆ. ಮೃತದೇಹ ಹೊಲದಲ್ಲಿ ಬಿದ್ದಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಧಾರವಾಡ ಎಸ್ಪಿ ಡಾ. ಗೋಪಾಲಕೃಷ್ಣ, "ಇಂದು ಬೆಳಗ್ಗೆ ಹುಬ್ಬಳ್ಳಿ ರಸ್ತೆಯಲ್ಲಿ ಕೊಲೆಯಾಗಿರುವ ಬಗ್ಗೆ ಸುದ್ದಿ ಬಂತು. ಘಟನೆಗೆ ಸಂಬಂಧಿಸಿ ಸಂದೀಪ್ ಎನ್ನುವವರು ಠಾಣೆಗೆ ಬಂದು ದೂರು ನೀಡಿದ್ದಾರೆ. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಹರೀಶ್ ಶಿಂಧೆ ಎನ್ನುವ ಯುವಕನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದೇವೆ. ತನಿಖೆ ನಂತರ ಎಲ್ಲ ತಿಳಿಯಲಿದೆ." ಎಂದು ತಿಳಿಸಿದರು.
ಇದನ್ನೂ ಓದಿ: ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭೀಕರ ಕೊಲೆ - MURDER CASE