ಚಿಕ್ಕಮಗಳೂರು: ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಜಲಪಾತದ ಬಳಿ ನಡೆದಿದೆ. ಮೃತನನ್ನು ಹೈದರಾಬಾದ್ ಮೂಲದ ಶ್ರವಣ್ (25) ಎಂದು ಗುರುತಿಸಲಾಗಿದೆ.
ಮೃತ ಶ್ರವಣ್ ತನ್ನ ಸ್ನೇಹಿತನ ಜೊತೆ ಹೈದರಾಬಾದ್ನಿಂದ ಪ್ರವಾಸಕ್ಕೆ ಬಂದಿದ್ದರು. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ, ಗಾಳಿಕೆರೆ, ಕಲ್ಲತ್ತಿಗರಿ, ಕೆಮ್ಮಣ್ಣುಗುಂಡಿಗೆ ಭೇಟಿ ನೀಡಿದ್ದ ಇಬ್ಬರು ಇಂದು ಹೆಬ್ಬೆ ಜಲಪಾತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಂಡೆ ಮೇಲಿಂದ ನೀರಿಗೆ ಬಿದ್ದಿದ್ದಾರೆ.
ಕೂಡಲೇ ಅವರ ಸ್ನೇಹಿತ ಹಾಗೂ ಇತರೆ ಪ್ರವಾಸಿಗರು ಶ್ರವಣ್ ಅವರನ್ನು ಮೇಲೆ ಎತ್ತಿದ್ದಾರೆ. ಆಗ ತಲೆಗೆ ಗಂಭೀರ ಗಾಯವಾಗಿತ್ತು. ಉಸಿರಾಡುತ್ತಿದ್ದ ಅವರನ್ನು ಕೂಡಲೇ ತರೀಕೆರೆ ತಾಲೂಕು ಆಸ್ಪತ್ರೆಗೆ ಕರೆತುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಆಸ್ಪತ್ರೆಗೆ ತರುವುದು ತುಂಬಾ ತಡವಾದ ಕಾರಣ ಆಸ್ಪತ್ರೆಗೆ ಬರುತ್ತಿದ್ದಂತೆ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಹೆಬ್ಬೆ ಜಲಪಾತ ತುಂಬಾ ಒಳಭಾಗದಲ್ಲಿ ಇರುವ ಫಾಲ್ಸ್. ಕೆಮ್ಮಣ್ಣುಗುಂಡಿಯಿಂದ ಸುಮಾರು ಏಳೆಂಟು ಕಿಲೋ ಮೀಟರ್ ಕಾಫಿ ತೋಟದ ಒಳಗೆ ಜೀಪಿನಲ್ಲೇ ಹೋಗಬೇಕು. ಹೆಬ್ಬೆ ಜಲಪಾತ ತರೀಕೆರೆಯಿಂದ ಸುಮಾರು 35-40 ಕಿ.ಮೀ. ಮೀಟರ್ ದೂರದಲ್ಲಿದೆ. ಅಲ್ಲಿಂದ ಶ್ರವಣ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.
ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದಿದ್ದರೆ ಯುವಕ ಸಾವನ್ನಪ್ಪುತ್ತಿರಲಿಲ್ಲ. ನೀರಿನ ಪ್ರಮಾಣ ಕಡಿಮೆ ಇದ್ದುದರಿಂದ ಮೇಲಿನಿಂದ ಬಿದ್ದ ಕೂಡಲೇ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಲಿಂಗದಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.
ಇದಿನ್ನೂ ಓದಿ: ಶಾಕಿಂಗ್..! ನಟಿ ನೂರ್ ಮಾಲಾಬಿಕಾ ಶವವಾಗಿ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ - ACTRESS NOOR MALABIKA FOUND DEAD