ದಾವಣಗೆರೆ: ಇಲ್ಲಿನ ರೈತ ಮಹಿಳೆಯೊಬ್ಬರು ವಿಶೇಷ ತಳಿಯ ಭತ್ತ ಬೆಳೆದು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಕ್ಕರೆ ಕಾಯಿಲೆಗೆ ರಾಮಬಾಣ ಎಂದೇ ಹೇಳಲಾಗುವ ನವರ ತಳಿಯ ಭತ್ತವನ್ನು(ಕೆಂಪು ಅಕ್ಕಿ) ರೈತ ಮಹಿಳೆ ನಾಟಿ ಮಾಡಿ, ಕೇವಲ 50 ರಿಂದ 55 ದಿನಗಳಲ್ಲೇ ಫಸಲು ತೆಗೆದಿದ್ದಾರೆ.
ಹೌದು, ಜಿಲ್ಲೆಯ ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಪುರ ಗ್ರಾಮದ ಮಂಜುಳಾ ಕಡಿಮೆ ಸಮಯದಲ್ಲಿ ವಿಶೇಷ ಭತ್ತದ ಬೆಳೆದ ರೈತ ಮಹಿಳೆ. ಯಾವುದೇ ತಳಿಯ ಭತ್ತ ಬೆಳೆದು ಕಟಾವಿಗೆ ಬರಲು ಕನಿಷ್ಠ 120 ದಿನಗಳು ಬೇಕಾಗುತ್ತದೆ. ಸಾಕಷ್ಟು ರಾಸಾಯನಿಕ ಗೊಬ್ಬರ ಬಳಸಿದ್ರೂ ಅಷ್ಟು ದಿನಗಳ ಅಗತ್ಯವಿದೆ. ಆದರೆ ಈ ರೈತ ಮಹಿಳೆ 'ನವರ' ಭತ್ತದ ತಳಿಯನ್ನು ಸಾವಯವ ಗೊಬ್ಬರದ ಸಹಾಯದಿಂದ ಕೇವಲ 50 ರಿಂದ 55 ದಿನಗಳಲ್ಲಿ ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಈ ಬಗ್ಗೆ ರೈತ ಮಹಿಳೆ ಮಂಜುಳಾ ಮಾತನಾಡಿ, ಎರಡೂವರೆ ಎಕರೆಯಲ್ಲಿ ನವರ ಭತ್ತ ಬೆಳೆದಿದ್ದು, ಇದಕ್ಕೆ ಕೊಟ್ಟಿಗೆ ಗೊಬ್ಬರ, ಡಿಕಂಪೋಸ್ಟ್ ಗೊಬ್ಬರವನ್ನು ಮನೆಯಲ್ಲೇ ತಯಾರು ಮಾಡಿ ಬಳಕೆ ಮಾಡಿರುವೆ. ಭತ್ತದ ಮಡಿ ಮಾಡಿ 21 ದಿನಗಳಲ್ಲಿ ಸಸಿ ಬಂದ ಮೇಲೆ ನಾಟಿ ಮಾಡಲಾಗಿದೆ. ನವರ ಭತ್ತವನ್ನು ನಾಟಿ ಮಾಡಿ 50 ದಿನಗಳು ಕಳೆದಿವೆ. ಈಗಾಗಲೇ ಭತ್ತ ಕಟಾವಿಗೆ ಬಂದಿದೆ. ಈ ಭತ್ತದ ಬೆಳೆಗೆ ಹೆಚ್ಚು ನೀರಿನ ಅಗತ್ಯವೂ ಇಲ್ಲ. ಈ ಬಾರಿ 40 ಚೀಲ ಭತ್ತ ಬರುವ ನಿರೀಕ್ಷೆಯಿದೆ. ನವರ ಭತ್ತದ ಫಸಲು ಬಂದ ಬಳಿಕ ಅದನ್ನು ಮಿಷನ್ಗೆ ಹಾಕಿಸಿ ನಂತರ ಬೇಡಿಕೆಯ ಮೇರೆಗೆ ಅಕ್ಕಿಯನ್ನು ಬೆಂಗಳೂರು, ಹೈದಾರಾಬಾದ್, ಆಂಧ್ರಪ್ರದೇಶ, ಧಾರವಾಡ, ರಾಯಚೂರು, ತೆಲಂಗಾಣಕ್ಕೆ ಸೇರಿದಂತೆ ಇತರೆಡೆಗೆ ರಫ್ತು ಮಾಡಲಾಗುತ್ತದೆ. ಈ ನವರ ಭತ್ತದಿಂದ ಬರುವ ಕೆಂಪು ಅಕ್ಕಿಯ ದರ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ 180 ರೂಪಾಯಿ ಇದೆ. ಈ ಅಕ್ಕಿ ಸಕ್ಕರೆ ಕಾಯಿಲೆ ನಿಯಂತ್ರಿಸುತ್ತದೆ ಎಂದು ಹೇಳಿದರು.
ಪತಿ ಅಗಲಿಕೆ ಬಳಿಕ ಮಹಿಳೆಯಿಂದ ಏಕಾಂಗಿ ಕೃಷಿ: ರೈತ ಮಹಿಳೆ ಮಂಜುಳಾ ತಮ್ಮ ಪತಿ ಅಕಾಲಿಕ ಮರಣದ ಬಳಿಕ ಏಕಾಂಗಿಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕೃಷಿಯಲ್ಲಿ ಪರಿಣತಿ ಪಡೆದಿರುವ ಇವರು ಈ ಹಿಂದೆ ವಿವಿಧ ಭತ್ತದ ತಳಿಗಳನ್ನು ಬೆಳೆದು ಗಮನ ಸೆಳೆದಿದ್ದರು. ಕೃಷಿ ಮಾಡಿಯೇ ಮಂಜುಳಾ ಅವರು ತಮ್ಮ ಇಬ್ಬರು ಪುತ್ರಿಯರಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಕೃಷಿ ಮಾಡುವ ಜೊತೆಗೆ ಟೈಲರಿಂಗ್ ಮಾಡಿ ಮಕ್ಕಳ ಭವಿಷ್ಯ ರೂಪಿಸಿದ್ದಾರೆ. ಆದ್ದರಿಂದ ಇಬ್ಬರು ಪುತ್ರಿಯರು ಕೂಡ ತಾಯಿಗೆ ಕೃಷಿಯಲ್ಲಿ ಸಾಥ್ ನೀಡುತ್ತಿದ್ದಾರೆ.
ಈ ಬಗ್ಗೆ ಪುತ್ರಿ ಸುಷ್ಮಾ ಮಾತನಾಡಿ, ನಮ್ಮ ತಾಯಿ ಕಷ್ಟಪಟ್ಟು ಕೃಷಿ ಮಾಡುತ್ತಿದ್ದಾರೆ. ಜೊತೆಗೆ ನಮಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿದ್ದಾರೆ. ಅಲ್ಲದೆ ಟೈಲರಿಂಗ್ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಅಮ್ಮ ಸಾವಯವ ಕೃಷಿ ಮಾಡುತ್ತಿರುವುದರಿಂದ ನಾವು ಕೈಲಾದಷ್ಟು ಸಹಾಯ ಮಾಡುತ್ತೇವೆ. ನವರ ಭತ್ತ ಬೆಳೆಯಲು ಹಾಗೂ ಭತ್ತ ಕಟಾವ್ ಮಾಡಲು, ಪಾರ್ಸಲ್ ಕಳಿಸಲು ಸಹಕಾರ ನೀಡುತ್ತೇವೆ. ಭತ್ತ ನಾಟಿ ಮಾಡಿದ ಕೇವಲ 55 ದಿನಕ್ಕೆ ಕಟಾವ್ಗೆ ಬಂದಿದೆ. ರಾಜ್ಯ ಹಲವೆಡೆಗೆ ನವರ ಅಕ್ಕಿಯನ್ನು ರಫ್ತು ಮಾಡುತ್ತೇವೆ ಎಂದು ತಿಳಿಸಿದರು.