ಕಲಬುರಗಿ: ಬಿಸಿಲಿನಿಂದ ಕಂಗೆಟ್ಟಿದ್ದ ಕಲಬುರಗಿಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಕಳೆದೆರಡು ದಿನಗಳಿಂದ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಆಗುತ್ತಿದೆ. ಶನಿವಾರ ಸುರಿದ ಮಳೆಗೆ ಹಲವಾರು ಅವಾಂತಾರ ಸೃಷ್ಟಿಯಾಗಿದ್ದು, ಸಿಡಿಲು ಬಡಿದು ರೈತ ಮಹಿಳೆ ಹಾಗೂ ಶ್ವಾನ ಬಲಿಯಾಗಿರುವ ಘಟನೆ ಚಿಂಚೋಳಿ ತಾಲೂಕಿನ ಬೋನಸಪೂರ ಗ್ರಾಮದಲ್ಲಿ ನಡೆದಿದೆ.
ಜೋರು ಮಳೆಯಾಗುತ್ತಿದ್ದರಿಂದ ಸ್ವಪ್ನಾ(48) ಮತ್ತು ಅವರು ಸಾಕಿದ್ದ ಶ್ವಾನದೊಂದಿಗೆ ಮರದ ಕೆಳಗೆ ಆಶ್ರಯಪಡೆದಿದ್ದರು. ಈ ವೇಳೆ ಸಿಡಿಲು ಬಡಿದು ಸ್ವಪ್ನಾ ಮತ್ತು ಶ್ವಾನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಸು ದೂರದಲ್ಲಿದ್ದ ಮಗ ಜ್ಞಾನೇಶ್ವರ್ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಯಲ್ಲಿ ಯುವಕನ ಶವ ಪತ್ತೆ
ಅಫಜಲಪುರ: ಬಾವಿಯೊಂದರಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ. ಜಾವೀದ್ ಚಿನ್ನಮಳ್ಳಿ (27) ಎಂಬವರನ್ನು ದುಷ್ಕರ್ಮಿಗಳು ಹತ್ಯೆಗೈದ ಮೃತದೇಹವನ್ನು ಬಾವಿಗೆ ಎಸೆದಿದ್ದಾರೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಜಾವೇದ್ ತಾಯಿ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಾಲಕನಾಗಿ ಕೆಲಸ ಮಾಡುತ್ತಿದ್ದ ಜಾವೇದ್ ಮತದಾನದ ನಡೆದ ಮಾರನೆ ದಿನ ರಾತ್ರಿ ನಾಪತ್ತೆಯಾಗಿದ್ದ, ಶುಕ್ರವಾರ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದೊಂದು ಉದ್ದೇಶಿತ ಕೊಲೆಯಾಗಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ ಕಾರಣ ದುಷ್ಕರ್ಮಿಗಳು ಕೊಲೆ ಮಾಡಿ ಬಾವಿಗೆ ಎಸೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ದುಷ್ಕರ್ಮಿಗಳು ಜಾವೀದ್ರನ್ನು ಪಾರ್ಟಿ ಮಾಡಲು ಕರೆದೊಯ್ದಿದ್ದರು. ಜಮೀನೊಂದರಲ್ಲಿ ಪಾರ್ಟಿ ಮಾಡಿದ್ದರು. ನಂತರ ಹತ್ಯೆ ಮಾಡಿ ಬಾವಿಗೆ ಎಸೆದಿದ್ದಾರೆ. ಕಾಂಗ್ರೆಸ್ ಪರ ಮತ ಹಾಕಿಸಿದ್ದಕ್ಕೆ ಹತ್ಯೆಗೈದಿರುವ ಆರೋಪ ಕೇಳಿಬಂದಿದೆ. ಗಾಣಗಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಮೈಸೂರು - ಕೊಡಗಿನಲ್ಲಿ ಸಿಡಿಲು ಸಹಿತ ಧಾರಾಕಾರ ಮಳೆ: ಇಬ್ಬರ ಸಾವು, ಹಲವು ಅವಾಂತರ ಸೃಷ್ಟಿ - Heavy Rainfall