ಶಿವಮೊಗ್ಗ: ಕಾಡಿಗೆ ತರಗೆಲೆಯನ್ನು ತರಲು ಹೋಗಿದ್ದ ವ್ಯಕ್ತಿಯನ್ನು ಕಾಡಾನೆಯೊಂದು ತುಳಿದು ಸಾಯಿಸಿರುವ ಘಟನೆ ಹೊಸನಗರದ ರಿಪ್ಪನಪೇಟೆ ಬಳಿಯ ಬಸವಾಪುರ ಗ್ರಾಮದಲ್ಲಿ ನಡೆದಿದೆ. ಬಸಾವಪುರ ಗ್ರಾಮದ ತಿಮ್ಮಪ್ಪ (58) ಸಾವನ್ನಪ್ಪಿದ ವ್ಯಕ್ತಿ.
ತಿಮ್ಮಪ್ಪ ಇಂದು ಬೆಳಗ್ಗೆ ಕಾಡಿಗೆ ತರಗೆಲೆ ತರಲು ಹೋಗಿದ್ದರು. ಈ ವೇಳೆ, ಕಾಡಾನೆ ಅವರನ್ನು ತುಳಿದು ಹಾಕಿದೆ. ಸ್ವಲ್ಪ ದೂರದಲ್ಲಿ ತರಗೆಲೆ ಗೂಡಿಸುತ್ತಿದ್ದ ಮಹಿಳೆಯರು ತಿಮ್ಮಪ್ಪನ ಶವವನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ತೆರಳಿ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮೃತ ತಿಮ್ಮಪ್ಪ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮೃತರಿಗೆ ಪತ್ನಿ ಹಾಗೂ ಪುತ್ರರು ಇದ್ದಾರೆ. ಈ ಭಾಗದಲ್ಲಿ ಕಾಡಾನೆಗಳು ಕಳೆದ ಒಂದು ವರ್ಷದಿಂದ ಉಪಟಳ ನೀಡುತ್ತಿದ್ದವು. ಇಷ್ಟು ದಿನ ರೈತ ಬೆಳೆದ ಬೆಳೆಗಳಾದ ಭತ್ತ, ಅಡಕೆ ಸೇರಿದಂತೆ ಇತರೆ ಬೆಳೆಯನ್ನು ನಾಶ ಮಾಡುತ್ತಿದ್ದವು. ಇಂದು ರೈತನನ್ನು ಕೊಂದು ಹಾಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.