ದಾವಣಗೆರೆ: ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರ ಮುಂದುವರೆದಿದೆ. ಪರಿಣಾಮ ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ರೈಲ್ವೆ ಅಂಡರ್ಪಾಸ್ನಲ್ಲಿ ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತಿದೆ. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಅಂಡರ್ಪಾಸ್ನಲ್ಲಿ ಅರ್ಧದಷ್ಟು ಮುಳುಗಿತ್ತು. ಇದನ್ನು ಗಮನಿಸಿದ ಕುರ್ಕಿ ಗ್ರಾಮಸ್ಥರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ನೀರಿನಲ್ಲಿ ಸಿಲುಕಿದ್ದ ವಾಹನವನ್ನು ಟ್ರ್ಯಾಕ್ಟರ್ ಸಹಾಯದಿಂದ ಹೊರ ತರಲಾಗಿದೆ. ವಾಹನ ನೀರಿನಲ್ಲಿ ಮುಳುಗಿದ್ದ ಪರಿಣಾಮ ಮಕ್ಕಳ ಮಾರ್ಕ್ಸ್ ಕಾರ್ಡ್, ಜಾತಿ - ಆದಾಯ ಪ್ರಮಾಣ ಪತ್ರ, ಪುಸ್ತಕಗಳು ಮತ್ತು ಬಟ್ಟೆಗಳು ಒದ್ದೆಯಾಗಿವೆ. ಗ್ರಾಮಸ್ಥರಾದ ರಾಜಶೇಖರ್ ಮಕ್ಕಳಿಗೆ ಆಶ್ರಯ ನೀಡಿ ಅವರು ಬಾಳೇಹೊನ್ನೂರಿನ ಬಸರೀಕಟ್ಟೆ ಗ್ರಾಮದ ಶಾಲೆಗೆ ತೆರಳಲು ಸಹಾಯ ಮಾಡಿದ್ದಾರೆ. ಮಕ್ಕಳು ಜಗಳೂರು ತಾಲೂಕಿನ ಪಲ್ಲಾಗಟ್ಟೆಯ ಉಚ್ಚಂಗಿಪುರ ಗ್ರಾಮದವರು ಎಂದು ತಿಳಿದು ಬಂದಿದೆ.
ಅಂಡರ್ಪಾಸ್ನಲ್ಲಿ ಸಿಲುಕಿದ 18 ಜನರಿದ್ದ ಟೆಂಪೋ: ಮತ್ತೊಂದೆಡೆ, ನಿನ್ನೆ ತಡರಾತ್ರಿ ಹಾವೇರಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ನದಿಯಂತಾದ ರೈಲ್ವೆ ಅಂಡರ್ ಪಾಸ್ನಲ್ಲಿ 18 ಜನರಿದ್ದ ಟೆಂಪೋ ಸಿಲುಕಿದ ಘಟನೆ ರಾಣೇಬೆನ್ನೂರು ಹೊರವಲಯದಲ್ಲಿ ನಡೆದಿದೆ. ಸುಮಾರು ಒಂದು ಗಂಟೆ ನೀರಿನಲ್ಲೇ ಇದ್ದ ಟೆಂಪೋವನ್ನು ರೈಲ್ವೆ ಇಲಾಖೆ ಸಿಬ್ಬಂದಿ ಜೆಸಿಬಿ ಸಹಾಯದಿಂದ ಹೊರಗೆಳೆದು ತಂದಿದ್ದಾರೆ. ಗುತ್ತಲದಿಂದ ರಾಣೆಬೆನ್ನೂರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಇದನ್ನೂ ಓದಿ: VIDEO; ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿಢೀರ್ ಮಳೆ: ಅಬ್ಬರಿಸಿದ ದರ್ಪಣತೀರ್ಥ ನದಿ