ಹುಬ್ಬಳ್ಳಿ: ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಪ್ರಕರಣ ತಿರುವು ಪಡೆದುಕೊಂಡಿದೆ. ವೈಯಕ್ತಿಕ ವಿಚಾರವಾಗಿ ಯುವಕನ ಮೇಲೆ ಹಲ್ಲೆ ನಡೆದಿದೆ, ಮೀಟರ್ ಬಡ್ಡಿ ವ್ಯವಹಾರ ಸಂಬಂಧ ಅಲ್ಲ ಎಂದು ಡಿಸಿಪಿ ಮಹಾನಿಂಗ ನಂದಗಾವಿ ಸ್ಪಷ್ಟಪಡಿಸಿದ್ದಾರೆ.
ಹಲ್ಲೆಗೊಳಗಾದ ವಿನಾಯಕ ರೋಣ ಎಂಬಾತನ ಸಹೋದರ ಕಾರ್ತಿಕ ನೀಡಿದ ದೂರಿನ ಮೇರೆಗೆ ಗಣೇಶ್ ಸಿದ್ದಾಪುರ, ಅಭಿಷೇಕ್ ರಾಮಗಿರಿ, ಯಲ್ಲಪ್ಪ ರಾಮಗಿರಿ, ಮಣಿಕಂಠ ಭಜಂತ್ರಿ, ವರುಣ ಭಜಂತ್ರಿ, ತಿಲಕ್ ಭಜಂತ್ರಿ ಎಂಬುವವರನ್ನು ಬಂಧಿಸಿ, ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಗಣೇಶ ಸಿದ್ದಾಪುರ ಪತ್ನಿಗೆ ಹಲ್ಲೆಗೊಳಗಾದ ವಿನಾಯಕ ರೋಣ ಫೋನ್ ಕರೆ ಮತ್ತು ಮೆಸೇಜ್ ಮೂಲಕ ಕಿರುಕುಳ ನೀಡಿದ್ದ. ಈ ಕಾರಣದಿಂದ ಹಲ್ಲೆ ನಡೆದಿದೆ, ಮೀಟರ್ ಬಡ್ಡಿ ದಂಧೆ ವಿಚಾರವಾಗಿ ಅಲ್ಲ. ಈಗಾಗಲೇ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿಗಣೇಶ ಸಿದ್ದಾಪುರ ಪತ್ನಿ, ವಿನಾಯಕ ರೋಣ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಈ ಸಂಬಂಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.