ಬೆಂಗಳೂರು: ಹೆಲ್ಮೆಟ್ ಹಾಕದೇ ವಾಹನ ಚಲಾಯಿಸಿದ್ದನ್ನು ಮೊಬೈಲ್ನಲ್ಲಿ ಫೋಟೋ ತೆಗೆದಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್ ಕಾನ್‌ಸ್ಟೆಬಲ್ ಕೈ ಬೆರಳನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ನಗರದಲ್ಲಿ ನಡೆದಿದೆ. ವಾಹನ ಸವಾರನ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಂಧಿಸಿದ್ದಾರೆ.
ಬಿಟಿಎಂ ಲೇಔಟ್ ನಿವಾಸಿ ಸೈಯ್ಯದ್ ಸಫಿ ಬಂಧಿತ ಆರೋಪಿ. ಎಂಬಿಎ ವ್ಯಾಸಂಗ ಪೂರ್ಣಗೊಳಿಸಿ ಗುಜರಿ ವ್ಯವಹಾರ ನಡೆಸುತ್ತಿದ್ದ ಈತ ಇಂದು ಬೆಳಗ್ಗೆ 11.30ರ ವೇಳೆ ಮರಿಗೌಡ ರಸ್ತೆಯ 11ನೇ ಕ್ರಾಸ್ ಬಳಿ ಹೆಲ್ಮೆಟ್ ಹಾಕದೇ ವಾಹನ ಚಲಾಯಿಸುತ್ತಿದ್ದ. ಇದನ್ನು ಕಂಡ ಕರ್ತವ್ಯನಿರತ ಟ್ರಾಫಿಕ್ ಕಾನ್‌ಸ್ಟೆಬಲ್ ಸಿದ್ರಾಮೇಶ್ವರ ಕೌಜಲಗಿ ಎಂಬವರು ಸಂಚಾರಿ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲು ಮೊಬೈಲ್ನಲ್ಲಿ ವಾಹನದ ನೋಂದಣಿ ಫಲಕವನ್ನು ಫೋಟೋ ತೆಗೆದಿದ್ದಾರೆ.
ಇದನ್ನು ಕಂಡ ಸಯ್ಯದ್, "ಯಾಕೆ ಫೋಟೋ ತೆಗೆಯುತ್ತಿದ್ದೀಯಾ? ನಂಬರ್ ಪ್ಲೇಟ್ ಬಿಚ್ಚಿಕೊಡುತ್ತೇನೆ, ಎಷ್ಟು ಕೇಸ್ ಹಾಕೊಳ್ತೀಯಾ ಹಾಕ್ಕೋ ಎಂದು ಏಕವಚನದಲ್ಲೇ ನಿಂದಿಸಿ ಕಾನ್‌ಸ್ಟೆಬಲ್ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸವಾರನನ್ನು ಹಿಂಬಾಲಿಸಿ ಅಡ್ಡಗಟ್ಟಿ ವಾಹನವನ್ನು ರಸ್ತೆ ಬದಿಗೆ ಹಾಕುವಂತೆ ಸೂಚಿಸಿದ್ದಕ್ಕೆ ಜಗಳವಾಡಿದ ಸಯ್ಯದ್, ಸಿದ್ರಾಮೇಶ್ವರ ಕೌಜಲಗಿ ಅವರ ಎಡ ಕೈಬೆರಳನ್ನು ಕಚ್ಚಿ ಗಾಯಗೊಳಿಸಿದ್ದಾನೆ.
ಈ ವೇಳೆ ಸಾರ್ವಜನಿಕರ ನೆರವಿನಿಂದ ಕೂಡಲೇ ವಾಹನ ಸವಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ, ಬೆದರಿಕೆ ಹಾಕಿರುವ ಸಂಬಂಧ ಸಂಚಾರ ಪೊಲೀಸರು ನೀಡಿದ ದೂರಿನ ಮೇರೆಗೆ ವಿಲ್ಸನ್ ಗಾರ್ಡನ್ ಠಾಣೆಯ ಕಾನೂನು ಸುವ್ಯವಸ್ಥೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾನ್ಸ್ಟೇಬಲ್ ಮೇಲೆ ಹಲ್ಲೆ ಆರೋಪ; ಎಂಟು ಜನರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಪ್ರಕರಣ