ಶಿವಮೊಗ್ಗ: ಪುತ್ರ ಶೋಕಂ ನಿರಂತರಂ ಅನ್ನೋ ಮಾತಿದೆ. ಹೀಗೆಯೇ ತಮ್ಮ ಪುತ್ರನ ನೆನಪಿನಲ್ಲಿ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಜಯಶ್ರೀ ಎಂಬುವರು ಕಳೆದ 20 ವರ್ಷಗಳಿಂದ ಗಣೇಶನ ಮೂರ್ತಿ ತಯಾರಿಸಿಕೊಂಡು ಬರುತ್ತಿದ್ದಾರೆ.
ಜಯಶ್ರೀ ಅವರ ಪುತ್ರ ಕಾರ್ತಿಕ್ ವಿಕಲಚೇತನನಾಗಿದ್ದ. ಗಣಪನ ಸೇವೆ ಮಾಡಿದ್ರೆ ತಮ್ಮ ಮಗ ಗುಣಮುಖನಾಗಬಹುದೆಂದು ಜಯಶ್ರೀ ಅವರು ತಮ್ಮ ಮನೆಯಲ್ಲಿ ತಮ್ಮ ಪತಿ ಸತೀಶ್ ಕೋಟೆಕರ್ ಹಾಗೂ ತಮ್ಮ ಪುತ್ರರ ಜೊತೆ ಗಣೇಶನ ಮೂರ್ತಿ ತಯಾರು ಮಾಡುತ್ತಿದ್ದಾರೆ.
ತಮ್ಮ ಮನೆಯಲ್ಲಿಯೇ ಕೆರೆ ಮಣ್ಣನ್ನು ತಂದು ಅದನ್ನು ಹದ ಮಾಡಿ, ಬೇರೆ ಮಣ್ಣನ್ನು ಮಿಕ್ಸ್ ಮಾಡಿ ಚೆನ್ನಾಗಿ ಒಣಗಿಸಿ ಮೂರ್ತಿ ತಯಾರಿಸುತ್ತಾರೆ. ಇವರು ಅರ್ಧ ಅಡಿ ಮೂರ್ತಿಯಿಂದ 3 ಅಡಿ ಎತ್ತರದ ಗಣಪತಿಯನ್ನು ತಯಾರು ಮಾಡುತ್ತಿದ್ದಾರೆ. ಬಣ್ಣದ ಗಣಪನ ಜೊತೆ ಬೇಡಿಕೆಯಂತೆ ನೈಸರ್ಗಿಕ ಗಣೇಶನನ್ನು ಕೂಡ ತಯಾರಿಸುತ್ತಿದ್ದಾರೆ. ಪ್ರತಿ ವರ್ಷ 300ಕ್ಕೂ ಅಧಿಕ ಗಣೇಶನನ್ನು ತಯಾರಿಸಿ ಮಾರಾಟ ಮಾಡುತ್ತಾರೆ.
ಜಯಶ್ರೀ ತಯಾರು ಮಾಡುವ ಗಣಪ ಸುಂದರವಾಗಿದ್ದು, ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗಿದೆ. ಗಣೇಶ ಚೌತಿಗೂ ಮುನ್ನ ಮೂರು ತಿಂಗಳಿನಿಂದ ಗಣೇಶನ ಮೂರ್ತಿ ತಯಾರಿಕೆ ಪ್ರಾರಂಭ ಮಾಡುತ್ತಾರೆ. ಸಣ್ಣ ಮೂರ್ತಿಗಳನ್ನು ಅಚ್ಚು ಹಾಕಿ ಮಾಡುತ್ತಾರೆ. ನಂತರ ಅದಕ್ಕೆ ಕಾಲು, ಕೈ ಗಳನ್ನು ಮಾಡುತ್ತಾರೆ. ಇನ್ನು ದೊಡ್ಡ ಗಣಪತಿಗಳನ್ನು ಸಂಪೂರ್ಣ ಕೈಯಲ್ಲೇ ಮಾಡುತ್ತಾರೆ.
ಇವುಗಳನ್ನು ತಯಾರು ಮಾಡಲು ಕಾಲಾವಕಾಶ ಬೇಕಾಗುತ್ತದೆ. ಇದರಿಂದ ಬೇಗನೆ ಗಣಪನನ್ನು ತಯಾರು ಮಾಡಲು ಪ್ರಾರಂಭಿಸುತ್ತಾರೆ. ಮಣ್ಣಿನ ಮೂರ್ತಿಗಳು ಒಣಗಿದ ನಂತರ ಅದಕ್ಕೆ ಬಣ್ಣ ಹಚ್ಚುವುದು ಮಾಡಿ ಒಣಗಿಸಲು ಇಡಲಾಗುತ್ತದೆ. ಹಬ್ಬ ಹತ್ತಿರ ಬಂದಾಗ ಅವುಗಳಿಗೆ ಅಂತಿಮ ರೂಪವನ್ನು ನೀಡಲಾಗುತ್ತದೆ. ಇವರ ಬಳಿ ಒಂದು ತಿಂಗಳ ಮುಂಚೆಯೇ ಬರುವ ಗ್ರಾಹಕರು ಗಣಪನನ್ನು ಖರೀದಿಸಿ, ಹಬ್ಬದ ದಿನ ತೆಗೆದುಕೊಂಡು ಹೋಗುತ್ತಾರೆ.
ಗಣೇಶನ ಮೂರ್ತಿ ತಯಾರಿಕೆಯ ಕುರಿತು ಜಯಶ್ರೀ ಅವರು ಈಟಿವಿ ಭಾರತ ಜೊತೆ ಮಾತನಾಡಿ, 'ನಮ್ಮ ತವರು ಮನೆ ಬಳ್ಳಾರಿಯಲ್ಲಿ ನಮ್ಮ ತಂದೆ, ಅಣ್ಣಂದಿರು ಗಣೇಶನ ಮೂರ್ತಿ ತಯಾರು ಮಾಡುತ್ತಿದ್ದರು. ನಾನು ಅವರ ಜೊತೆ ಮೂರ್ತಿ ತಯಾರಿಕೆ ಕಲಿತಿದ್ದೆ. ಮದುವೆಯಾಗಿ ಶಿವಮೊಗ್ಗಕ್ಕೆ ಬಂದಾಗ ಮೊದಲು ಸುಮ್ಮನಿದ್ದೆ. ನಮಗೆ ವಿಕಲಚೇತನ ಮಗುವಾದ ಮೇಲೆ ಗಣಪನ ಸೇವೆ ಮಾಡಿದ್ರೆ ನಮ್ಮ ಮಗ ಚೆನ್ನಾಗಿ ಆಗಬಹುದೆಂದು ಮೂರ್ತಿ ತಯಾರಿಕೆ ಪ್ರಾರಂಭಿಸಿದೆವು' ಎಂದರು.
ನೈಸರ್ಗಿಕ ಗಣಪನಿಗೆ ಬೇಡಿಕೆ ಹೆಚ್ಚಳ : 'ಆಗ ನನ್ನ ಮಗ ಸ್ವಲ್ಪ ಹುಷಾರಾದ. ಆದರೆ ಆತ ತನ್ನ 14ನೇ ವಯಸ್ಸಿನಲ್ಲಿ ತೀರಿ ಹೋದ. ಇದರಿಂದ ಆತನ ಹೆಸರು ಕಾರ್ತಿಕ ಆಗಿದ್ದ ಕಾರಣಕ್ಕೆ ಆತನ ಹೆಸರಿನಲ್ಲಿ ಕಾರ್ತಿಕ್ ಆರ್ಟ್ಸ್ ಎಂದು ಪ್ರಾರಂಭಿಸಿ, ಕಳೆದ 20 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ ಮಾಡುತ್ತಿದ್ದೇವೆ. ನಮಗೆ ಪ್ರತಿ ವರ್ಷ ಮೂರ್ತಿಗಾಗಿ ಉತ್ತಮ ಬೇಡಿಕೆ ಇದೆ. ಈಗ ಚೆನ್ನಾಗಿ ನಡೆಸಲಾಗುತ್ತಿದೆ. ನನಗೆ ನನ್ನ ಪತಿ ಹಾಗೂ ಮಕ್ಕಳಿಬ್ಬರು ಸಪೋರ್ಟ್ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ನೈಸರ್ಗಿಕ ಗಣಪನಿಗೆ ಬೇಡಿಕೆ ಹೆಚ್ಚಾಗಿದ್ದು, ನಾವು ಅದಕ್ಕೆ ಆದ್ಯತೆ ನೀಡುತ್ತಿದ್ದೇವೆ' ಎಂದರು.
ಇವರ ಪತಿ ಸತೀಶ್ ಕೋಟೆಕರ್ ಮಾತನಾಡಿ, 'ನಮ್ಮ ಮನೆಯಲ್ಲಿ ನಮ್ಮ ಅಜ್ಜ- ಅಜ್ಜಿ ಗಣೇಶನ ಮೂರ್ತಿ ಮಾಡುತ್ತಿದ್ದರು. ಜಯಶ್ರೀ ಮದುವೆಯಾದ ಮೇಲೆ ನಾವು ಮನೆಯಲ್ಲಿ ಗಣೇಶನ ತಯಾರಿಕೆಯಲ್ಲಿ ತೊಡಗಿಸಿಕೊಂಡೆವು. ಅಂದಿನಿಂದ ಗಣೇಶನ ದಯೆಯಿಂದ ಎಲ್ಲವೂ ಚೆನ್ನಾಗಿ ನಡೆದುಕೊಂಡು ಬಂದಿದೆ. ನಾವು ಶಿವಮೊಗ್ಗದ ಸುತ್ತಮುತ್ತಲಿನ ಕೆರೆಯಿಂದ ಮಣ್ಣನ್ನು ತಂದು ಹದ ಮಾಡಿ ಮೂರ್ತಿ ತಯಾರಿಸುತ್ತೇವೆ' ಎಂದು ಹೇಳಿದರು.
'ನಾವು ಮೊದಲು ಗೋಪಾಳದ ನಿವಾಸಿಗಳಿಗಾಗಿ ಮೂರ್ತಿ ತಯಾರು ಮಾಡುತ್ತಿದ್ದೆವು. ಈಗ ಎಲ್ಲಾ ಕಡೆಯಿಂದ ಬೇಡಿಕೆ ಬರುತ್ತಿದೆ. ಈಗ ನಮಗೆ ತೆಗೆದುಕೊಂಡ ಆರ್ಡರ್ ಪೂರೈಕೆ ಮಾಡಿದರೆ ಸಾಕು ಎನ್ನುವಂತೆ ಆಗಿದೆ. ಸರ್ಕಾರ ಪಿಒಪಿ ಗಣಪನನ್ನು ಬ್ಯಾನ್ ಮಾಡಿ ನಮ್ಮಂತಹವರಿಗೆ ಅನುಕೂಲ ಮಾಡಿಕೊಟ್ಟಿದೆ. ಜನ ಈಗ ಪರಿಸರ ಸ್ನೇಹಿ ಗಣಪನ ಕಡೆ ಆಕರ್ಷಿತರಾಗಿದ್ದು, ನಾವು ಅಂತಹ ಮೂರ್ತಿಗಳನ್ನೇ ಮಾಡುತ್ತಿದ್ದೇವೆ. ಅಲ್ಲದೆ ಇತರೆ ಗಣಪನ ಮೂರ್ತಿಗಳಿಗೆ ವಾಟರ್ ಪೈಂಟ್ಗಳನ್ನೇ ಬಳಸುತ್ತಿದ್ದೇವೆ' ಎಂದು ತಿಳಿಸಿದರು.