ದಾವಣಗೆರೆ: ವಿವಾಹಿತ ಮಹಿಳೆಯನ್ನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ ಭಗ್ನ ಪ್ರೇಮಿಗೆ ಜೀವಾವಧಿ ಶಿಕ್ಷೆ, 20,000 ರೂ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಚೇತನ್ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ. ಹರಿಹರ ನಗರದ ನಿವಾಸಿ ಕೊಲೆಯಾಗಿದ್ದ ವಿವಾಹಿತ ಮಹಿಳೆ.
ಮೃತ ವಿವಾಹಿತ ಮಹಿಳೆಯು ಆರೋಪಿ ಚೇತನ್ ಜೊತೆ ಸದಾ ದೂರವಾಣಿಯಲ್ಲಿ ಮಾತನಾಡುತ್ತಿದ್ದಳು. ಇದು ಮಹಿಳೆಯ ಗಂಡನ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪತ್ನಿಗೆ ಪತಿ ಎಚ್ಚರಿಕೆ ನೀಡಿದ್ದರು. ಅಲ್ಲದೇ ಮಹಿಳೆಗೆ ತಾಯಿ ಮತ್ತು ಅಣ್ಣ ಕೂಡ ಬುದ್ಧಿಮಾತು ಹೇಳಿದ್ದರು. ಇದರಿಂದಾಗಿ ಮಹಿಳೆ, ಚೇತನ್ ಸಹವಾಸವನ್ನು ಬಿಟ್ಟಿದ್ದರು. ಇದರಿಂದ ಕೋಪಗೊಂಡ ಆತ, ಮಹಿಳೆ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದ. 2020ರ ಡಿ.29 ರಂದು ದಾವಣಗೆರೆ ಜಿಲ್ಲೆಯ ಹರಿಹರ ನಗರದ ಮಹೇಜನಹಳ್ಳಿ ಊರಮ್ಮನ ದೇವಾಸ್ಥಾನದ ಹತ್ತಿರ ಮಹಿಳೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ.
2020ರ ಡಿ.29ರಂದು ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆ ಮಾರಾಟವಾಗದೇ ಉಳಿದಿದ್ದ ತರಕಾರಿಯನ್ನು ಕೊಂಡೊಯ್ಯಲು ಆಟೋಗೆ ಕಾಯುತ್ತಾ ದೇವಸ್ಥಾನದ ಬಳಿ ನಿಂತುಕೊಂಡಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಆರೋಪಿ, ಮಹಿಳೆಯ ಮೇಲೆ ದಾಳಿ ಮಾಡಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದನ್ನು. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಹರಿಹರ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಳು.
ಈ ಸಂಬಂಧ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ತನಿಖೆ ಕೈಗೊಂಡಿದ್ದ ತನಿಖಾಧಿಕಾರಿಗಳಾದ ಸಿಪಿಐ ಶಿವಪ್ರಸಾದ್ ಎಂ ಅವರು ಆರೋಪಿಯನ್ನು ಬಂಧಿಸಿದ್ದರು. ಆರೋಪಿ ಬಂಧನದ ಬಳಿಕ ದಸ್ತಗಿರಿ ಮಾಡಿ ಭಾಗಶಃ ತನಿಖೆ ನಡೆಸಿದ್ದ ನಂತರ ವರ್ಗಾವಣೆಯಾಗಿ ಬಂದ ಹರಿಹರ ಟೌನ್ ಠಾಣೆಯ ಸಿಪಿಐ ಸತೀಶ ಕುಮಾರ್ ಯು ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜೆ.ವಿ ವಿಜಯಾನಂದ ಅವರು ಆರೋಪ ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿದರು. ಈ ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ಸತೀಶ ಕೆ ಎಸ್ ನ್ಯಾಯ ಮಂಡನೆ ಮಾಡಿದ್ದರು.
ಇದನ್ನೂ ಓದಿ: ಹಿಂದೂ ಪದದ ಕುರಿತು ಆಕ್ಷೇಪಾರ್ಹ ಹೇಳಿಕೆ ಆರೋಪ: ಸಚಿವ ಜಾರಕಿಹೊಳಿ ವಿರುದ್ಧ ವಿಚಾರಣೆಗೆ ಅನುಮತಿಸಿದ ಕೋರ್ಟ್