ಗಂಗಾವತಿ(ಕೊಪ್ಪಳ): ಚುನಾವಣೆಯ ಕರ್ತವ್ಯ ನಿರತ ಪ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಯೊಬ್ಬರ ವಾಹನಕ್ಕೆ ಕೆಕೆಆರ್ಟಿಸಿ ಬಸ್ ಡಿಕ್ಕಿ ಹೊಡೆದು ಪ್ಲೈಯಿಂಗ್ ಸ್ಕ್ವಾಡ್ ವಾಹನ ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ವಿದ್ಯಾನಗರದಲ್ಲಿ ನಡೆದಿದೆ.
ಘಟನೆಯಲ್ಲಿ ವಾಹನ ಚಾಲಕ ಶಿವಾನಂದ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಪೇದೆಯೊಬ್ಬರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗಾಯಾಳು ಶಿವಾನಂದ ಅವರನ್ನು ಗಂಗಾವತಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಚುನಾವಣೆಯ ಕರ್ತವ್ಯದಲ್ಲಿದ್ದ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನೆಯ ವಿವರ: ಗಂಗಾವತಿಯಿಂದ ಗುರುವಾರ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಹೈದರಾಬಾದ್ಗೆ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಹೊರಟಿತ್ತು. ವಿದ್ಯಾನಗರದ ಬಳಿ ತಲುಪಿದಾಗ ವಾಹನಗಳ ತಪಾಸಣೆಗೆ ಎಂದು ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ತಪ್ಪಿಸಲು ಹೋಗಿ ಬಸ್ ಚಾಲಕ ರಸ್ತೆಯ ಪಕ್ಕ ನಿಂತಿದ್ದ ಸರಕಾರಿ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿದ್ದ ಮೀನುಗಾರಿಕೆ ಇಲಾಖೆಯ ಅಧಿಕಾರಿ ಶಿವಕುಮಾರ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ವಾಹನದಲ್ಲಿದ್ದ ಚಾಲಕನಿಗೆ ಗಂಭೀರವಾದ ಗಾಯಗಳಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ನಾಗರಾಜ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಲೋಕಸಮರ ಅಕ್ರಮ: ರಾಜ್ಯದಲ್ಲಿ 187.85 ಕೋಟಿ ಮೌಲ್ಯದ ನಗದು, ಮದ್ಯ, ಇತರ ವಸ್ತುಗಳು ಜಪ್ತಿ - Lok Sabha Election