ಬಾಗಲಕೋಟೆ: ಸಿಡಿಲು ಬಡಿದು ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಲೋಕಾಪೂರ ಪಟ್ಟಣದ ಸಮೀಪದ ಮಲ್ಲಾಪೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಭಾಗ್ಯಶ್ರೀ ಮಲ್ಲಪ್ಪ ಪಡೆಪ್ಪನವರ (16) ಮೃತ ಬಾಲಕಿ.
ಸಂಜೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಕೂಡಲೇ ಬಾಲಕಿಯನ್ನು ಲೋಕಾಪೂರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾಳೆ. ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪೂರ ಭೇಟಿ ನೀಡಿ ಮೃತಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪ್ರಕೃತಿ ವಿಕೋಪದ ಅಡಿಯಲ್ಲಿ ಸರ್ಕಾರದಿಂದ ಐದು ಲಕ್ಷ ರೂಪಾಯಿಗಳ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಗಡಿ ಜಿಲ್ಲೆಯಲ್ಲಿ ಭರ್ಜರಿ ಮಳೆ: ವಾಹನ ಸವಾರರ ಪರದಾಟ; ಚಾಮರಾಜನಗರ: ಶುಕ್ರವಾರ ಸಂಜೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಭರ್ಜರಿ ಮಳೆಯಾಗಿದ್ದು, ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ಹರಿದ ಪರಿಣಾಮ ವಾಹನ ಸವಾರರು ಪರದಾಡಿದರು. ಈ ಹೆದ್ದಾರಿಯು ಬೇಗೂರಿನಲ್ಲಿ ಹಾದು ಹೋಗಲಿದ್ದು ಗುಂಡ್ಲುಪೇಟೆ, ಕೇರಳ, ತಮಿಳುನಾಡಿಗೆ ತೆರಳುವವರು ನೀರಿನ ಮಧ್ಯೆ ವಾಹನ ಚಲಾಯಿಸಲು ಪ್ರಯಾಸಪಟ್ಟರು.
ಬೇಗೂರು, ಬೆಳಚಲವಾಡಿ ಸುತ್ತಮುತ್ತಲೂ ಕೂಡ ಭರ್ಜರಿ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಂತರ್ಜಲ ಮಟ್ಟ ಹೆಚ್ಚಿ ಕೊಳವೆಬಾವಿಗಳಲ್ಲಿ ಮತ್ತೆ ನೀರಿನ ಸಿಂಚನ ಹೊಮ್ಮುವ ನಿರೀಕ್ಷೆ ವ್ಯಕ್ತವಾಗಿದೆ. ಇನ್ನು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ, ಬಂಡಳ್ಳಿ, ಅಜ್ಜಿಪುರ ಸುತ್ತಮುತ್ತ ಒಂದೂವರೆ ತಾಸು ಭರ್ಜರಿ ಮಳೆಯಾಗಿದೆ.
ಹನೂರು ತಾಲೂಕಿನಲ್ಲಿ ಕಳೆದ 10 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಕೌದಳ್ಳಿ ಗ್ರಾಮದಲ್ಲಿ ಪ್ರತಿ ಮಳೆಯೂ ಅವಾಂತರ ಸೃಷ್ಟಿಸುತ್ತಿದೆ. ಕೌದಳ್ಳಿಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿರದ ಕಾರಣ ನಿನ್ನೆ ಸುರಿದ ಭರ್ಜರಿ ಮಳೆಗೆ ಚರಂಡಿ ತುಂಬಿ ಹೊಳೆಯಂತೆ ಅಂಗಡಿ-ಮಳಿಗೆಗಳಿಗೆ ನುಗ್ಗಿ ವ್ಯಾಪಾರಿಗಳನ್ನು ಪರದಾಡುವಂತೆ ಮಾಡಿದೆ.
ಸೊರಬದಲ್ಲಿ ಸಿಡಿಲು ಬಡಿದು ಎತ್ತು ಸಾವು: ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ಸೇರಿ ತಾಲೂಕಿನಾದ್ಯಂತ ಶುಕ್ರವಾರ ಬಿರುಸಿನ ಗಾಳಿ, ಮಿಂಚು-ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಸೊರಬದ ಅರೇಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಗ್ರಾಮದ ಮಂಜಪ್ಪ ಅವರು ಅಮೃತ್ ಮಹಲ್ ತಳಿಯ ಒಂದು ಜೊತೆ ಎತ್ತಗಳನ್ನು ಸಾಕಿದ್ದರು. ಜಮೀನಿನಲ್ಲಿ ಜಾನುವಾರುಗಳನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ಅಮೃತ್ ಮಹಲ್ ತಳಿಗೆ ಸೇರಿದ ಒಂದು ಎತ್ತಿಗೆ ಸಿಡಿಲು ಬಡಿದಿದೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದೆ. ಇದರಿಂದ ರೈತನಿಗೆ ಸುಮಾರು 55 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಶು ಆಸ್ಪತ್ರೆಯ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾನಿಗೊಳಗಾದ ಮನೆಗಳಿಗೆ ಸಚಿವ ತಂಗಡಗಿ ಭೇಟಿ: ಗಂಗಾವತಿ: ಗುರುವಾರ ರಾತ್ರಿ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಕಾರಟಗಿ ತಾಲ್ಲೂಕಿನಲ್ಲಿ ನೂರಾರು ಮನೆಗಳಿಗೆ ಹಾನಿಯಾಗಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ರಾಮನಗರದಲ್ಲಿ ತೀವ್ರ ಹಾನಿಗೀಡಾದ 14 ಮನೆಗಳಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ತಂಗಡಗಿ, ಮಳೆಗಾಳಿಗೆ ಹಾನಿಗೀಡಾದ ಮನೆ, ಬೆಳೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ನೀಡಬೇಕು. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ನೀಡಿ ಆದಷ್ಟು ಶೀಘ್ರ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು. ಮುಖ್ಯವಾಗಿ ಕಂದಾಯ, ತೋಟಗಾರಿಕೆ, ಜೆಸ್ಕಾಂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹಾನಿಗೀಡಾದ ಮನೆ, ಬೆಳೆ, ವಿದ್ಯುತ್ ಕಂಬ, ರಸ್ತೆ ಸೇರಿದಂತೆ ಇತರ ಮಾಹಿತಿಯನ್ನು ತ್ವರಿತವಾಗಿ ಒದಗಿಸಬೇಕೆಂದು ಸೂಚನೆ ನೀಡಿದರು.
ಬಿಜೆಪಿ ಒತ್ತಾಯ: ಗುರುವಾರ ಬೀಸಿದ ಬಿರುಗಾಳಿ ಮಳೆಗೆ ತಾಲ್ಲೂಕಿನಲ್ಲಿ ಸಾಕಷ್ಟು ಪ್ರಮಾಣದ ಮನೆಗಳಿಗೆ ಹಾನಿಯಾಗಿದ್ದು, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಿ ಸಂತ್ರಸ್ತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಬಿಜೆಪಿ ಕೊಪ್ಪಳ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ್ ಧಡೆಸೂಗೂರು ಹಾಗೂ ಕಾರಟಗಿ ಮಂಡಳ ಅಧ್ಯಕ್ಷ ಮಂಜುನಾಥ ಮಸ್ಕಿ ಆಗ್ರಹಿಸಿದರು.
ಇದನ್ನೂ ಓದಿ: ಮುತ್ತೋಡಿ ಅಭಯಾರಣ್ಯದಲ್ಲಿ ಆಲಿಕಲ್ಲು ಮಳೆ ; ಕುಣಿದು ಕುಪ್ಪಳಿಸಿದ ಜನ - hailstorm