ಆನೇಕಲ್(ಬೆಂಗಳೂರು): ಹುಳಿಮಾವು ಭಾಗದ ಬೇಗೂರು-ಕೊಪ್ಪ ಮುಖ್ಯ ರಸ್ತೆಯ ಬಹು ಅಂತಸ್ತಿನ 29ನೇ ಮಹಡಿಯಿಂದ 12 ವರ್ಷದ ಬಾಲಕಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ. ತಮಿಳುನಾಡು ಮೂಲದ ದಂಪತಿಯ ಏಕೈಕ ಮಗಳು ಆಗಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ಬಾಲಕಿಯ ತಂದೆ ಸಾಫ್ಟ್‌ವೇರ್ ಇಂಜಿನಿಯರ್, ತಾಯಿ ಗೃಹಿಣಿಯಾಗಿದ್ದಾರೆ. ಬೇಗೂರು-ಕೊಪ್ಪ ಮುಖ್ಯರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್‌ನ 29ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಬಾಡಿಗೆಗೆ ನೆಲೆಸಿದ್ದರು. ಬನ್ನೇರುಘಟ್ಟ ರಸ್ತೆಯ ಖಾಸಗಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಮುಂಜಾನೆ ನಸುಕಿನ 5 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್ ಸಂಕೀರ್ಣದ ಸೆಕ್ಯುರಿಟಿ ಗಾರ್ಡ್ ಶಬ್ಧ ಕೇಳಿ ಕಾರಿಡಾರ್ಗೆ ಬಂದು ನೋಡಿದಾಗ ಘಟನೆ ಬೆಳಕಿಗ ಬಂದಿದೆ.
ಇಂದು ಮುಂಜಾನೆ 4.30ಕ್ಕೆ ಬಾಲಕಿ ಎದ್ದಾಗ ತಾಯಿ ಪ್ರಶ್ನಿಸಿದ್ದರು. ಆಗ ಬಾಲಕಿ ಮತ್ತೆ ಮಲಗುವುದಾಗಿ ಹೇಳಿ ರೂಮಿಗೆ ಹೋಗಿದ್ದಳು. ಆದರೆ, ಸೆಕ್ಯೂರಿಟಿ ಗಾರ್ಡ್ ಜೋರಾದ ಶಬ್ಧ ಕೇಳಿ ನೋಡಿದಾಗ ಬಾಲಕಿ ಮೇಲಿಂದ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ. ತಕ್ಷಣ ಆತ ಅಪಾರ್ಟ್‌ಮೆಂಟ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾನೆ. ನಂತರ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಮೈಸೂರು: ಕ್ಷುಲ್ಲಕ ಕಾರಣಕ್ಕೆ ತಾಯಿ, ತಂಗಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಪುತ್ರ ಅರೆಸ್ಟ್