ಚಾಮರಾಜನಗರ: ಪೂಜೆ ಹಾಗೂ ದೀಕ್ಷೆ ಕೊಡುವ ವಿಚಾರಕ್ಕೆ ಅರ್ಚಕರ ಗುಂಪಿನಲ್ಲಿ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಪ್ರಸಿದ್ಧ ಯಾತ್ರಸ್ಥಳವಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ನಡೆದಿದೆ. ಗಾಯಾಳುಗಳನ್ನು ಚಿಕ್ಕಲೂರು ದೇವಸ್ಥಾನದ ಅರ್ಚಕರಾದ ಶಂಕರಪ್ಪ (65), ಶಿವಕುಮಾರ ಸ್ವಾಮಿ (40) ಹಾಗೂ ನಂಜುಂಡ ಸ್ವಾಮಿ (32) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಸಿದ್ದಪ್ಪಾಜಿ ದೇವರ ಗುಡ್ಡ ದೀಕ್ಷೆ ಪಡೆಯಲು ನೂರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ದೀಕ್ಷೆ ಕೊಡಲು ಒಂದು ಗುಂಪು ದೇಗುಲದ ಹೊರಗೆ ತಯಾರಿ ಮಾಡಿಕೊಳ್ಳುತ್ತಿತ್ತು. ಈ ಸಮಯದಲ್ಲಿ ಮತ್ತೊಂದು ಗುಂಪು ದೀಕ್ಷೆ ನಾವು ಕೊಡುತ್ತೇವೆ ಎಂದು ತಡೆ ಒಡ್ಡಿದ್ದಾರೆ. ಹೀಗಾಗಿ ನಂಜುಂಡಸ್ವಾಮಿ ಮತ್ತು ಶಂಕರಪ್ಪನ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ.
ನಡೆದ ಗಲಾಟೆಯಲ್ಲಿ ಬೆತ್ತ ಮತ್ತು ತ್ರಿಶೂಲಗಳನ್ನು ಹಲ್ಲೆಗೆ ಆಯುಧವಾಗಿ ಬಳಸಿಕೊಂಡಿದ್ದು, ವ್ಯಕ್ತಿಯೊಬ್ಬರ ತೊಡೆ ಮೂಳೆ ಮತ್ತು ಇಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.