ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡು ಗ್ರಾಮದ ರೈತನೊಬ್ಬ ತನಗಿದ್ದ ಒಂದೂವರೆ ಎಕೆರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದ. ಕೆಲ ದಿನಗಳ ಹಿಂದೆ ಈರುಳ್ಳಿ ಬೆಳೆಗೆ ಔಷಧಿ ಸಿಂಪಡಣೆ ಮಾಡಿದ್ದು, ಇದೀಗ ಬೆಳೆ ಒಣಗಲಾರಂಭಿಸಿದೆ ಎಂದು ರೈತ ಕಂಗಾಲಾಗಿದ್ದಾನೆ.
ಅಸಗೋಡು ಗ್ರಾಮದ ರೈತ ಹಾಲಪ್ಪ ಸುಮಾರು 90 ಸಾವಿರ ದಿಂದ 1 ಲಕ್ಷ ರೂ. ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದಾರೆ. ಉತ್ತಮ ಇಳುವರಿ ಬರಲೆಂದು ರೈತ ಹಾಲಪ್ಪ ಮತ್ತು ಅವರ ಪುತ್ರ ಬೀರಲಿಂಗೇಶ್ವರ ಅವರು ಔಷಧಿ ಖರೀದಿಸಿ ತಂದು ಈರುಳ್ಳಿಗೆ ಸಿಂಪಡಿಸಿದ್ದರು. ಆ ಬಳಿಕ ಈರುಳ್ಳಿ ಬೆಳೆ ಹಂತ - ಹಂತವಾಗಿ ಒಣಗಲಾರಂಭಿಸಿದೆ ಎಂದು ರೈತ ಹಾಲಪ್ಪ ಆರೋಪಿಸಿದ್ದಾರೆ.
ಈ ವಿಷಯವನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ, ಇದು ಔಷಧಿಯ ಸಮಸ್ಯೆ ಅಲ್ಲ, ಮಳೆ ಸಮಸ್ಯೆ ಎಂದು ಔಷಧಿ ಕಂಪನಿಯವರು ಹೇಳುತ್ತಿದ್ದಾರೆ ಎಂದು ರೈತ ದೂರಿದ್ದಾರೆ. ಇದರಿಂದ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ರೈತ ಬೀರಲಿಂಗೇಶ್ವರ 'ಈಟಿವಿ ಭಾರತ' ಜೊತೆ ಮಾತನಾಡಿ, "ಫಸಲು ಹೆಚ್ಚು ಬರಲಿ ಎಂಬ ಕಾರಣಕ್ಕೆ ಈರುಳ್ಳಿಗೆ ಔಷಧಿ ಸಿಂಪಡಣೆ ಮಾಡಲಾಗಿದೆ. ಈಗ ಒಂದು ಈರುಳ್ಳಿ ಕೈ ಸೇರದಂತಾಗಿದೆ. ಇಂದಿನ ದರಕ್ಕೆ ಹೋಲಿಸಿದರೆ ಲಕ್ಷಾಂತರ ರೂ. ನಷ್ಟ ಆಗಿದೆ. ಈರುಳ್ಳಿ ಬೆಳೆಯಲು 90 ಸಾವಿರ ಖರ್ಚು ಮಾಡಲಾಗಿತ್ತು. ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ಗೆ 5 ಸಾವಿರ ರೂ ದರ ಇದೆ. ನಮ್ಮ ಪರಿಸ್ಥಿತಿ ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೃಷಿ, ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿದ್ದೆವು. ಅಧಿಕಾರಿಗಳು ಔಷಧಿ ಸಿಂಪಡಣೆ ಮಾಡಿದ್ದರಿಂದ ಈರುಳ್ಳಿ ಬೆಳೆ ಹಾಳಾಗಿದೆ ಎಂದಿದ್ದಾರೆ" ಎಂದು ಅಳಲು ತೋಡಿಕೊಂಡರು.
ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಸಿದ್ದೇಶ್ ಮಾತನಾಡಿ, "ಅಸಗೋಡು ಗ್ರಾಮ ರೈತ ಬೀರಲಿಂಗೇಶ್ವರ ಔಷಧಿ ಸಿಂಪಡಣೆ ಮಾಡಿದ ಬಳಿಕ ಇಡೀ ಈರುಳ್ಳಿ ಬಾಡಿ ಹೋಗಿದೆ. ಈ ಸಂಬಂಧ ತೋಟಗಾರಿಕೆ ಸಚಿವರನ್ನು ಸಂಪರ್ಕ ಮಾಡಿದ್ದು, ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. 1.5 ಎಕರೆಯಲ್ಲಿ ಬೆಳೆ ಬೆಳೆಯಲಾಗಿತ್ತು. 250 ಪಾಕೆಟ್ ಈರುಳ್ಳಿ ಫಸಲು ಬರಬೇಕಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿ: ಹೆಸರುಕಾಳು ದರ ಏರಿಕೆ, ರೈತರ ಮೊಗದಲ್ಲಿ ಮೂಡಿದ ಮಂದಹಾಸ - green gram price hike