ಹುಬ್ಬಳ್ಳಿ: ಉತ್ತರಾಖಂಡ ಸಹಸ್ತ್ರತಾಲ್ ಶಿಖರದ ಚಾರಣದಲ್ಲಿ ಹಿಮಪಾತದಿಂದ ಸಾವನ್ನಪ್ಪಿದ 9 ಕನ್ನಡಿಗರಲ್ಲಿ ಹುಬ್ಬಳ್ಳಿ ಮೂಲದ ಮುಂಗುರವಾಡಿ ದಂಪತಿ ಕೂಡ ಒಳಗೊಂಡಿದ್ದಾರೆ.
ಕರ್ನಾಟಕದಿಂದ ತೆರಳಿದ್ದ 22 ಚಾರಣಿಗರ ತಂಡ ಉತ್ತರಾಖಂಡದ ಎತ್ತರದ ಸಹಸ್ತ್ರತಾಲ್ ಮಯಳಿ ಪ್ರದೇಶಕ್ಕೆ ತೆರಳಿ, ಅಲ್ಲಿಂದ ಚಾರಣ ಆರಂಭಿಸಿತ್ತು. ಚಾರಣದ ಗಮ್ಯಸ್ಥಾನವನ್ನು ತಲುಪಿದ ತಂಡ ಮತ್ತೆ ಶಿಬಿರಕ್ಕೆ ಹಿಂತಿರುಗಲು ಮುಂದಾಗಿದೆ. ಆಗ ಮಾರ್ಗಮಧ್ಯೆ ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟು, ಎಲ್ಲಾ ಚಾರಣಿಗರು ಅಪಾಯಕ್ಕೆ ಸಿಲುಕಿದ್ದರು. ಇದರಲ್ಲಿ 9 ಚಾರಣಿಗರು ಮೃತಪಟ್ಟಿದ್ದು, 13 ಜನರನ್ನು ರಕ್ಷಣೆ ಮಾಡಲಾಗಿದೆ.
ಚಾರಣಕ್ಕೆ ಹೋದ 22 ಮಂದಿಯ ಪೈಕಿ ಹುಬ್ಬಳ್ಳಿ ಮೂಲದ ವಿನಾಯಕ ಮುಂಗುರವಾಡಿ ಹಾಗೂ ಸುಜಾತಾ ಮುಂಗುರವಾಡಿ ದಂಪತಿ ಕೊನೆಯುಸಿರೆಳೆದಿದ್ದಾರೆ. ಈ ದಂಪತಿ ಜನನದ ಇಸ್ವಿ ಬೇರೆ ಬೇರೆಯಾದರು ದಿನಾಂಕ ತಿಂಗಳು ಒಂದೇ(ಅಕ್ಟೋಬರ್ 3). ವಿಪರ್ಯಾಸವೆಂದರೆ ಜೂನ್ 4ರಂದು ಒಟ್ಟಿಗೆ ಮೃತಪಟ್ಟು ಸಾವಲ್ಲಿಯೂ ಒಂದಾಗಿದ್ದಾರೆ.
ಮೃತರಿಬ್ಬರೂ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ 1994 ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ವಿನಾಯಕ ಮೆಕ್ಯಾನಿಕಲ್ ವಿಭಾಗದಿಂದ ಚಿನ್ನದ ಪದಕ ಪಡೆದಿದ್ದರು. ಆರಂಭಿಕ ದಿನಗಳಲ್ಲಿ ಹುಬ್ಬಳ್ಳಿಯ ಉಣಕಲ್‌ನಲ್ಲಿ ವಾಸವಿದ್ದ ಇಬ್ಬರೂ ಉದ್ಯೋಗ ಅರಸಿಕೊಂಡು 1996ರಲ್ಲಿ ಬೆಂಗಳೂರಿಗೆ ತೆರಳಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಲೇ 'ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್' ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದ 16 ವರ್ಷಗಳಿಂದ ಜನರ ಸೇವೆಯಲ್ಲಿ ತೊಡಗಿದ್ದರು.
ಪ್ರತಿವರ್ಷ ಚಾರಣ ಮಾಡುವ ಹವ್ಯಾಸ ಹೊಂದಿದ್ದರು. ಇವರ ಪುತ್ರಿ ಅದಿತಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದು, ಪುತ್ರ ಇಶಾನ್ ಇಂಜಿನಿಯರಿಂಗ್ ಓದುತ್ತಿದ್ದಾರೆ.
ಕಣ್ಣೀರು ಹಾಕಿದ ಸ್ನೇಹಿತರು: ವಿನಾಯಕ ಮುಂಗುರವಾಡಿ ಹಾಗೂ ಸುಜಾತಾ ನೆನೆದು ಅವರ ಸ್ನೇಹಿತರಾದ ಸುರೇಶ ಪಾಟೀಲ್ ಹಾಗೂ ಸುಮನ್ ಪಾಟೀಲ್ ದಂಪತಿ ಕಣ್ಣೀರು ಹಾಕಿದ್ದಾರೆ. ವಿನಾಯಕ ಹಾಗೂ ಸುಜಾತಾ ಸ್ನೇಹ ಜೀವಿಗಳಾಗಿದ್ದರು. ಜೊತೆಗೆ ಸಾಹಸ ಪ್ರವೃತ್ತಿ ಹೊಂದಿದ್ದರು. ಇಬ್ಬರು ನಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದರು ಎಂದು ಹಳೆ ನೆನಪುಗಳನ್ನು ಸುರೇಶ ಪಾಟೀಲ್ ದಂಪತಿ ಮೆಲುಕು ಹಾಕಿದರು.
ಬೆಂಗಳೂರಿಗೆ ಹೋದ ಮೇಲೆ ಉತ್ತರ ಕರ್ನಾಟಕ ಸ್ನೇಹ ಲೋಕ ಟ್ರಸ್ಟ್ ಮಾಡಿಕೊಂಡು ಒಳ್ಳೆ ಕೆಲಸ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲೂ ಉತ್ತಮ ಕೆಲಸ ಮಾಡಿದ್ದಾರೆ. ಎರಡು ಖಾಲಿ ಸ್ಲಾಟ್ಲ್ಲಿ ಟ್ರೆಕ್ಕಿಂಗ್ ಹೋಗುವ ಅವಕಾಶ ಪಡೆದಿದ್ದರು. ಆದರೆ ಇದೀಗ ವಿಧಿಯಾಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕಂಬನಿ ಮಿಡಿದಿದ್ದಾರೆ.