ಬಾಗಲಕೋಟೆ: ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಘಟಕ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಡಳಿತ ಕಚೇರಿಯವರೆಗೆ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸೇರಿದಂತೆ ಶಾಸಕರು, ಸ್ಥಳಿಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಡಳಿತ ಭವನ ಎದುರು ಮಾನವ ಸರಪಳಿ ನಿರ್ಮಾಣ ಮಾಡಿ, ಕೆಲ ಸಮಯ ರಸ್ತಾ ರೋಖಾ ನಡೆಸಿದರು. ಈ ವೇಳೆ ರಾಜ್ಯಪಾಲರ ಪ್ರತಿಕೃತಿ ದಹನ ಮಾಡುವಾಗ ನಾಗಪ್ಪ ಮಾಗಿ ಎಂಬ ಕಾರ್ಯಕರ್ತನಿಗೆ ಬೆಂಕಿ ತಗುಲಿದ ಘಟನೆ ಸಹ ನಡೆಯಿತು. ಪೆಟ್ರೋಲ್ ಹಾಕಿ ಪ್ರತಿಕೃತಿ ದಹನ ಮಾಡುವಾಗ ಪೆಟ್ರೋಲ್ ಸುರಿಯುತ್ತಿದ್ದ ಸಮಯದಲ್ಲಿ ಮೈಗೆ ತಾಗಿದೆ. ಬೆಂಕಿ ತಾಗಿದ್ದರಿಂದ ಆತನ ಶರ್ಟ್ ಸುಟ್ಟು ಹೋಗಿದೆ. ತಕ್ಷಣ ಕಾರ್ಯಕರ್ತರು, ಚಿಕ್ಕ-ಪುಟ್ಟ ಗಾಯಗೊಂಡ ಕಾರ್ಯಕರ್ತನಿಗೆ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಬಿಜೆಪಿ, ಜೆಡಿಎಸ್ ಪಕ್ಷದ ವಿರುದ್ಧ ಹರಿಹಾಯ್ದು ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಬಿಜೆಪಿಯವರಿಗೆ ಸಿದ್ದರಾಮಯ್ಯನವರ ಕಂಡರೆ ಭಯ ಇದೆ. ಮುಂದೆ ಎಲ್ಲಿ ಮೋದಿ ಅವರ ಕುರ್ಚಿಗೆ ಸಿದ್ದರಾಮಯ್ಯ ಬರುತ್ತಾರೆ ಎಂಬ ನಡುಕದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ನಂತರ ಮನವಿ ಪತ್ರವನ್ನು ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.
ಇದನ್ನೂ ಓದಿ: ಚಾಮರಾಜನಗರ: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ - Congress Protest