ಬೆಂಗಳೂರು: ಬಿಬಿಎಂಪಿ ವ್ಯಾಪ್ತಿ ಬರುವ ಕೇಂದ್ರ, ಉತ್ತರ, ದಕ್ಷಿಣ ಮತ್ತು ಬೆಂಗಳೂರು ನಗರ ಸೇರಿದಂತೆ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 98,43,577 ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2024 ಅಂತಿಮ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣ-1ರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಅದರಂತೆ ಅಂತಿಮ ಮತದಾರ ಪಟ್ಟಿಯಲ್ಲಿ 50,78,525 ಪುರುಷ ಮತದಾರರರು, 47,63,268 ಮಹಿಳಾ ಮತದಾರರು ಹಾಗೂ 1,784 ಇತರ ಮತದಾರರು ಸೇರಿ ಒಟ್ಟು 98,43,577 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಬರುವ ಕೇಂದ್ರ, ಉತ್ತರ, ದಕ್ಷಿಣ ಮತ್ತು ಬೆಂಗಳೂರು ನಗರದ ಅಂತಿಮ ಮತದಾರರ ಪಟ್ಟಿ ಪ್ರತಿಗಳನ್ನು ಎಲ್ಲ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ.
ವೆಬ್ಸೈಟ್ದಲ್ಲಿ ಮಾಹಿತಿ: ಮತದಾರರು ತಮ್ಮ ಮತದಾರರ ಮಾಹಿತಿಯನ್ನು (ಹೆಸರು, ತಂದೆಯ ಹೆಸರು, ಸಂಬಂಧ, ಲಿಂಗ, ಜನ್ಮ ದಿನಾಂಕ ವಿಳಾಸ ಮತ್ತು ಪೋಟೊ) ಪರಿಶೀಲಿಸಿಕೊಂಡು ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ www.ceokarnataka.kar.nic.in ಮತ್ತು ಬಿಬಿಎಂಪಿ www.bbmp.gov.in ವೆಬ್‌ಸೈಟ್ ನಲ್ಲಿ ಸಹ ಅಂತಿಮ ಮತದಾರರ ಪಟ್ಟಿಯನ್ನು ಅಪ್ಲೋಡ್ ಮಾಡಲಾಗುವುದು ಎಂದರು.
ಸಾರ್ವಜನಿಕರು/ಮತದಾರರು ಮತದಾರರ ಪಟ್ಟಿ ಕಾರ್ಯ ಚಟುವಟಿಕೆಗಳ ಲಾಭವನ್ನು ಪಡೆದುಕೊಂಡು ಯಾವುದೇ ಕಚೇರಿಗೆ ಹೋಗದೇ ಅವರಿರುವ ಸ್ಥಳದಿಂದಲೇ ವೆಬ್ ಪೋರ್ಟಲ್- Voters.eci.gov.in,ವೋಟರ್ ಹೆಲ್ಪ್ ಲೈನ್ ಮೊಬೈಲ್ ಆಪ್ ಹಾಗೂ 1950 ವೋಟರ್ ಹೆಲ್ಪ್ ಲೈನ್ ಮುಖಾಂತರ ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಆಗಿರುವ ತಪ್ಪುಗಳಿಗೆ ಸಂಬಂಧಪಟ್ಟ ನಮೂನೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್, ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ. ಹರೀಶ್ ಕುಮಾರ್, ದಯಾನಂದ, ಸ್ನೇಹಲ್, ವಿನೋತ್ ಪ್ರಿಯಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ರಾಜ್ಯದಲ್ಲಿ 5,37,85,815 ಮತದಾರರು: ಬೆಂಗಳೂರಿನ ಶೇಷಾದ್ರಿ ರಸ್ತೆಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ಮತದಾರರ ಅಂತಿಮ ಪಟ್ಟಿ ಬಿಡುಗಡೆಗೊಳಿಸಿ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮಾತನಾಡಿ, ಅಂತಿಮ ಮತದಾರರ ಪಟ್ಟಿ- 2024 ರಲ್ಲಿ ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,37,85,815 ಹೆಚ್ಚಳವಾಗಿದ್ದು, ಇದರಲ್ಲಿ 2,69,33,750 ಪುರುಷ ಮತದಾರರು, 2,68,47,145 ಮಹಿಳಾ ಮತದಾರರು ಮತ್ತು 4,920 ಇತರ ಮತದಾರರು ಸೇರಿದ್ದಾರೆ'' ಎಂದು ವಿವರಿಸಿದರು.
''ಕರಡು ಪಟ್ಟಿಗೆ ಹೋಲಿಸಿದರೆ ಒಟ್ಟು ಮತದಾರರಲ್ಲಿ ನಿವ್ವಳ ಹೆಚ್ಚಳವು 4,08,653 ಆಗಿದ್ದು, ಈ ಪೈಕಿ ಮಹಿಳಾ ಮತದಾರರಲ್ಲಿ ಗಮನಾರ್ಹವಾಗಿ 2,77,717 ರಷ್ಟು ಮತದಾರರು ಸಂಖ್ಯೆ ಹೆಚ್ಚಳವಾಗಿದ್ದು, ಪುರುಷ ಮತದಾರರಲ್ಲಿ 1,30,912 ಮತ್ತು ಇತರ ಮತದಾರರಲ್ಲಿ 24 ಮತದಾರರ ಸಂಖ್ಯೆ ಹೆಚ್ಚಳ ಆಗಿರುತ್ತದೆ'' ಎಂದು ಸ್ಪಷ್ಟಪಡಿಸಿದರು.
''224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಅಂದರೆ 7,17,201 ಮತದಾರರನ್ನು ಹೊಂದಿದೆ. ವ್ಯತಿರಿಕ್ತವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 1,67,556 ಮತದಾರರಿದ್ದಾರೆ'' ಎಂದು ತಿಳಿಸಿದರು.
ಇದನ್ನೂಓದಿ:ಪಿಎಸ್ಐ ಹಗರಣ: ಸರ್ಕಾರಕ್ಕೆ ನ್ಯಾಯಾಂಗ ತನಿಖಾ ವರದಿ ಸಲ್ಲಿಕೆ