ಹುಬ್ಬಳ್ಳಿ: ತಂತ್ರಜ್ಞಾನ ಬೆಳೆದಂತೆ ಸೈಬರ್ ಕಳ್ಳರು ಅಮಾಯಕರನ್ನು ವಂಚಿಸಲು ವಿಚಿತ್ರ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಸೈಬರ್ ಕಳ್ಳರ ಹಾವಳಿಯಿಂದ ಅನೇಕ ಜನರು ಹಣ ಕಳೆದುಕೊಂಡು ಕಂಗಾಲಾಗುತ್ತಿದ್ದಾರೆ. ಈ ಮಧ್ಯೆ ಹುಬ್ಬಳ್ಳಿ ನಿವಾಸಿಯೊಬ್ಬರು ಸುಮಾರು 63 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿರುವ ಸುತ್ತೂರಿನ ನಿವಾಸಿ ಶಿವರಾಮ್ ಪುರೋಹಿತ್ ವಂಚನೆಗೊಳಗಾದವರು.
ದೂರಿನಲ್ಲೇನಿದೆ?: 01 ಏಪ್ರಿಲ್ 2024 ರಂದು ಇನ್ಸ್ಟಾಗ್ರಾಂನಲ್ಲಿ SNS Investment Old Coin Gallery, Mumbai ಎಂಬ ಕಂಪನಿಯ ಜಾಹೀರಾತು ನೋಡಿದ್ದೆ. ಇದರಲ್ಲಿ ಹಳೆಯ ನೋಟು ಹಾಗೂ ನಾಣ್ಯಗಳನ್ನು ಪಡೆದುಕೊಂಡು ಅದಕ್ಕೆ ಒಳ್ಳೆಯ ಬೆಲೆಯನ್ನು ಕೊಡುವುದಾಗಿ ಪ್ರಕಟಿಸಲಾಗಿತ್ತು. ಆ ಜಾಹೀರಾತು ನಿಜವೆಂದು ನಂಬಿದ ಅದರಲ್ಲಿನ ವಾಟ್ಸಾಪ್ ನಂಬರಿಗೆ ತಮ್ಮ ಬಳಿ ಇರುವ 5 ರೂಪಾಯಿಯ ಫೋಟೋವನ್ನು ಕಳುಹಿಸಿದ್ದೆ.
ಕಂಪನಿಯವರು ಈ ಐದು ರೂಪಾಯಿ ನೋಟಿಗೆ 11 ಲಕ್ಷ ಬೆಲೆಯನ್ನು ನಿಗದಿಪಡಿಸಿದ್ದರು. ಆದ್ರೆ ಈ 11 ಲಕ್ಷ ರೂಪಾಯಿಯನ್ನು ಪಡೆಯಲು ವಿವಿಧ ಶುಲ್ಕ ಪಾವತಿಸಬೇಕು ಎಂದು ನಂಬಿಸಿದ್ದರು. ವಿವಿಧ ಚಾರ್ಜ್ಗಳ ರೂಪದಲ್ಲಿ ನನ್ನ ವಿವಿಧ ಬ್ಯಾಂಕ್ ಖಾತೆಗಳಿಂದ ಆರೋಪಿಗಳು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 52,12,654 ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಶಿವರಾಮ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Quikr Company, Kolkota ಅವರು ಸಹ ವಿವಿಧ ಚಾರ್ಜ್ ಗಳ ರೂಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಂದ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 10,89,766 ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಶಿವರಾಮ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಹಂತ ಹಂತವಾಗಿ ಒಟ್ಟು 63,02,423 ರೂಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ದೂರುದಾರ ಶಿವರಾಮ್ ಅವರು ಮುಂಬೈನ ಶಿವರಾಜ್ ರಾವ್, ಎಸ್ಎನ್ಎಸ್ ಇನ್ವೆಸ್ಟ್ಮೆಂಟ್ ಓಲ್ಡ್ ಕ್ವಾಯಿನ್ ಗ್ಯಾಲರಿ, ಶಹಿಲ್‌ಮುಂಬೈ, ಪಂಕಜ್‌ಸಿಂಗ್ ಮುಂಬೈ, ಕ್ವಿಕರ್ ಕೋಲ್ಕತ್ತಾ ಹಾಗೂ ಟ್ಯಾನಮೆ ಸನ್ಬೋಟ್ ಕೋಲ್ಕತ್ತಾ ಅವರ ಮೇಲೆ ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.