ರಾಯಚೂರು : ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗ ಠಾಣೆ ಹಾಗೂ ಸಂಚಾರ ಠಾಣೆ ಅಧಿಕಾರಿಗಳು ನೈತಿಕ ಸ್ಥೈರ್ಯ ಮತ್ತು ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಫೆ.11 ರಂದು ಎಂಟು ಜನರಿಂದ ಕಾನ್ಸ್‌ಟೇಬಲ್ ಹನುಮಂತರಾಯ ಎಂಬುವವರ ಮೇಲೆ ಹಲ್ಲೆಯಾಗಿತ್ತು. ಇದೀಗ 59 ಪೊಲೀಸ್ ಕಾನ್ಸ್ಟೇಬಲ್ಗಳಿಂದ ಮೂರು ಪುಟಗಳ ಮನವಿ ಪತ್ರವನ್ನು ಎಸ್ಪಿ ಅವರಿಗೆ ನೀಡಿದ್ದಾರೆ. ಇದರಲ್ಲಿ ಐದು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದ್ದಾರೆ. ಅವುಗಳು ಈ ಕೆಳಗಿನಂತಿವೆ.
1) ನಮ್ಮ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಎಷ್ಟೇ ಪ್ರಭಾವಿತರಾಗಿದ್ದರೂ ಕೂಡಲೇ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು.
2) ನಾವುಗಳು ದೇವದುರ್ಗದಲ್ಲಿ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ರಾಜಕೀಯ ಒತ್ತಡಗಳನ್ನು ತಡೆಗಟ್ಟುವುದು.
3) ನಮ್ಮ ಮೂರ ಜನ ಸಿಬ್ಬಂದಿ ವಿರುದ್ಧ ದಾಖಲಾದ ಸುಳ್ಳು ಪ್ರಕರಣವನ್ನು "ಬಿ" ರಿಪೋರ್ಟ್ ಸಲ್ಲಿಸುವುದು,.
4) ಆಕ್ರಮ ಮರಳು ಸಾಗಿಸುವ ಟ್ರ್ಯಾಕರ್ಗಳ ಮೇಲೆ ಪಿ.ಐ ಅವರೊಂದಿಗೆ ದಾಳಿ ಮಾಡಿದ ಸಿಬ್ಬಂದಿಗಳ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳಬಾರದು.
5) ಶಾಸಕರ ನಿವಾಸ ಮತ್ತು ಜೆಡಿಎಸ್ ಪಕ್ಷದ ಕಚೇರಿಯು ಪೊಲೀಸ್ ಕಾಲೋನಿಗೆ ಹೊಂದಿಕೊಂಡಿದ್ದು, ದಿನದ 24 ಗಂಟೆಯೂ ಕೂಡ ಅವರ ಬೆಂಬಲಿಗರು ನಮ್ಮ ಕಾಲೋನಿಯಲ್ಲೇ ತಿರುಗಾಡುತ್ತಾ ಅವರ ಮನೆಗೆ ಹೋಗಿ ಬರುವುದು ಸಾಮಾನ್ಯವಾಗಿದೆ. ವಾಹನಗಳ ಸಂಖ್ಯೆಯೂ ಹೆಚ್ಚಾದ ಕಾರಣ ಧೂಳಿನಿಂದ ವೃದ್ಧರಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತಿದೆ. ಹೀಗಾಗಿ ಪೊಲೀಸ್ ಕಾಲೋನಿಯನ್ನು ಸರ್ವೇ ಮಾಡಿಸಿ ಹದ್ದು ಬಸ್ತಿಗೆ ಕಂಪೌಂಡ್ ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕಾನ್ಸ್‌ಟೇಬಲ್ ದೂರಿನಲ್ಲಿ ಉಲ್ಲೇಖಿಸಿರುವುದೇನು? : "2024 ಫೆ.11ರಂದು ದೊಂಡಂಬಳಿಯ ಬಳಿ ಕೃಷ್ಣಾ ನದಿಯಿಂದ ಅಕ್ರಮವಾಗಿ ಟ್ರ್ಯಾಕ್ಟರ್ ಮೂಲಕ ಮರಳು ಸಾಗಾಟ ಮಾಡುತ್ತಿದೆ ಎಂಬ ಖಚಿತ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ದೇವದುರ್ಗ ಠಾಣಾಧಿಕಾರಿ ಜೊತೆಯಲ್ಲಿ ಪೊಲೀಸ್ ಸಿಬ್ಬಂದಿ ತಂಡ ರಚಿಸಿಕೊಂಡು ಘಟನಾ ಸ್ಥಳಕ್ಕೆ ತೆರಳಲಾಗಿತ್ತು. ಈ ವೇಳೆ, ಎರಡು ಟ್ರ್ಯಾಕ್ಟರ್ಗಳು ಮರಳು ತುಂಬಿಕೊಂಡು ಹೋಗುತ್ತಿದ್ದವು. ನಮ್ಮನ್ನು ನೋಡಿದಾಗ, ಚಾಲಕರು ಟ್ರ್ಯಾಕ್ಟರ್ ಬಿಟ್ಟು ಓಡಿ ಹೋದರು. ಬಳಿಕ ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಯಿತು.
ತಕ್ಷಣ ರಾಜಕೀಯ ಮುಖಂಡರೊಬ್ಬರು ಠಾಣೆಗೆ ಕರೆ ಮಾಡಿ ಪ್ರಕರಣ ಸಂಬಂಧ ಇನ್ನಷ್ಟು ಮಾತನಾಡುವುದಿದೆ, ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರ(ಐಬಿ)ಗೆ ಬರುವಂತೆ ಹೇಳಿದ್ದರು. ಅವರ ಮಾತಿನಂತೆ ನಾನು ಐಬಿಗೆ ತೆರಳಿದೆ. ಇವರೆಲ್ಲರೂ ಅಲ್ಲಿ ಹಾಜರಿದ್ದರು. ಈ ವೇಳೆ, ನಮ್ಮ ಟ್ರ್ಯಾಕ್ಟರ್ಗಳನ್ನು ಹೇಗೆ ವಶಕ್ಕೆ ಪಡೆದುಕೊಂಡೆ ಎಂದು ಇಲ್ಲ-ಸಲ್ಲದ ಮಾತುಗಳನ್ನು ಆಡುತ್ತಾ ಅಶ್ಲೀಲ ಪದಗಳನ್ನು ಬಳಸಿದರು. ಸಾಲದು ಎಂಬಂತೆ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ, ನಾನು ಅಲ್ಲಿಂದ ತಪ್ಪಿಸಿಕೊಳ್ಳುವ ಹರಸಾಹಸ ಮಾಡಿದೆ. ಆದರೆ, ರೂಮಿನಲ್ಲಿ ಕೂಡಿ ಹಾಕಿ ನನ್ನ ಮೇಲೆ ಹಲ್ಲೆ ಮಾಡಿದರು. ಮುಂದೆ ಯಾವತ್ತಾದರೂ ನಮ್ಮ ಟ್ರ್ಯಾಕ್ಟರ್ಗಳನ್ನು ವಶಕ್ಕೆ ಪಡೆದಿದ್ದೇ ಆದಲ್ಲಿ ನಿನ್ನ ಜೀವಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿ ಕಳಿಸಿದ್ದಾರೆ'' ಎಂದು ಕಾನ್ಸ್‌ಟೇಬಲ್ ಹನುಮಂತರಾಯ ದೂರು ನೀಡಿದ್ದರು.
ಇದನ್ನೂ ಓದಿ : ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಆರೋಪ; ಎಂಟು ಜನರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಪ್ರಕರಣ