ಗಂಗಾವತಿ: ಇತ್ತೀಚೆಗೆ ಮೃತ ಪಿಎಸ್‌ಐ ಪರಶುರಾಮ ಅವರ ನಿವಾಸಕ್ಕೆ ಇಂದು ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ ನೀಡಿದರು. ಈ ವೇಳೆ ಕುಟುಂಬಕ್ಕೆ ಧೈರ್ಯ ತುಂಬಿದ ಅವರು 50 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಿಸಿದರು. ಜೊತೆಗೆ, ಪತ್ನಿಗೆ ಸರ್ಕಾರಿ ಹುದ್ದೆ ಕೊಡಿಸುವ ಭರವಸೆ ನೀಡಿದರು.
ಕಾರಟಗಿ ತಾಲ್ಲೂಕಿನ ಸೋಮನಾಳವ ಗ್ರಾಮದಲ್ಲಿ ಮಾತನಾಡಿದ ಗೃಹ ಸಚಿವರು, ಪರಶುರಾಮ ಪ್ರಾಮಾಣಿಕ ಪೊಲೀಸ್ ಅಧಿಕಾರಿ. ಅವರ ಪೋಸ್ಟ್ ಮಾರ್ಟಮ್ ವರದಿ ನಿರೀಕ್ಷಿಸುತ್ತಿದ್ದೇವೆ. ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಪರಶುರಾಮ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದರು ಎಂಬುದು ನಮಗೂ ಗೊತ್ತಾಗಿದೆ. ಆ ಇಡೀ ಕುಟುಂಬ ಇವತ್ತು ಸಂಕಷ್ಟಕ್ಕೀಡಾಗಿದೆ. ಇದು ಸಾಮಾನ್ಯ ನಷ್ಟ ಅಲ್ಲ. ನಮಗೂ ನಷ್ಟವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಸೂಕ್ತ ಹುದ್ದೆ ನೀಡುತ್ತೇವೆ: ಪತ್ನಿ ಬಿಇ ಇಂಜಿನಿಯರಿಂಗ್ ಮಾಡಿದ್ದಾರೆ. ಅವರಿಗೆ ಸೂಕ್ತ ಹುದ್ದೆ ಕೊಡುತ್ತೇವೆ. ರಾಯಚೂರು ಕೃಷಿ ವಿವಿ ಹಾಗೂ ಜೆಸ್ಕಾಂನಲ್ಲಿ ಹುದ್ದೆ ನೀಡಲು ಮನವಿ ಮಾಡಿದ್ದಾರೆ. ಸಿಎಂ ಜೊತೆ ಮಾತನಾಡಿ ಹುದ್ದೆ ಕೊಡಿಸುತ್ತೇವೆ ಎಂದು ತಿಳಿಸಿದರು.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ: ಅಧಿಕಾರಿಯ ಮೇಲೆ ಕ್ರಮ ಆಗಬೇಕೆನ್ನುವ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವರು, ವಿರೋಧ ಪಕ್ಷ ಹೇಳುವುದನ್ನು ನಾನು ಕೇಳೋಕೆ ತಯಾರಿಲ್ಲ. ಈ ಕೇಸ್‌ನಲ್ಲಿ ಸಿಬಿಐಗೆ ಕೊಡುವಂತಹ ಅರ್ಹತೆ ಏನಿಲ್ಲ. ಆ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು, ಆ ಕೆಲಸ ಮಾಡುತ್ತೇವೆ ಎಂದರು.
ಪ್ರಾಸಿಕ್ಯೂಷನ್ಗೆ ಕೊಟ್ಟರೆ ಕಾನೂನು ಹೋರಾಟ: ರಾಜಪಾಲರು ಸಿಎಂಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಶೋಕಾಸ್ ನೀಡಿದ್ದೇ ತಪ್ಪು. ಅದನ್ನು ಹಿಂಪಡೆಯರಿ ಎಂದು ಸಂಪುಟ ಸಭೆಯಲ್ಲಿ ಚರ್ಚಿಸಿ ಸಲಹೆ ನೀಡಿದ್ದೇವೆ. ಅವರು ಅದನ್ನು ಪಡೆಯಬಹುದು, ಇಲ್ಲವೇ ಬಿಡಬಹುದು. ನಾವು ನೀಡಿರುವ ಸಲಹೆಯನ್ನು ಅವರು ಹಾಗೇ ಇಟ್ಟುಕೊಂಡಿದ್ದಾರೆ. ಸಿಎಂ ರಾಜೀನಾಮೆ ನೀಡುವ ಯಾವುದೇ ತಪ್ಪು ಮಾಡಿಲ್ಲ. ಪ್ರಾಸಿಕ್ಯೂಷನ್ಗೆ ಕೊಟ್ಟರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯಸಭೆಯ 12 ಸ್ಥಾನಗಳಿಗೆ ಚುನಾವಣಾ ದಿನಾಂಕ ನಿಗದಿ - Rajya Sabha Election