ಧಾರವಾಡ: ''ಮೊದಲು ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದ್ದವು. ಆದರೆ, 370ನೇ ವಿಧಿ ರದ್ದುಗೊಳಿಸಿದ ನಂತರ ಉಗ್ರ ಚಟುವಟಿಕೆ ಸಂಪೂರ್ಣ ಬಂದ್ ಮಾಡಲಾಗಿದೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ತಾಲೂಕಿನ ನರೇಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಸಂಸದ ಕ್ರೀಡೋತ್ಸವದ ಕಬ್ಬಡಿ ಪಂದ್ಯ ಉದ್ಘಾಟಿಸಿ ಮಾತನಾಡಿದ ಅವರು, ''ಹಿಂದೆ ಬೆಂಗಳೂರು, ಹೈದರಾಬಾದ್ನಲ್ಲಿ ಬಾಂಬ್ ಹಾರುತ್ತಿದ್ದವು. ಈಗ ಎಲ್ಲಿಯಾದರೂ ಬಾಂಬ್ ಹಾರುತ್ತಿವೆಯಾ? ಪ್ರಸ್ತುತ ಎಲ್ಲಾ ಉಗ್ರ ಚಟುವಟಿಕೆಗಳು ಬಂದ್ ಆಗಿವೆ. ಏಕೆಂದರೆ, ಆರ್ಟಿಕಲ್ 370 ಅನ್ನು ಕಿತ್ತೆಸೆಯಲಾಗಿದೆ. ಮೊದಲು ದೇಶದೊಳಗೆ ಬಂದು ಬಾಂಬ್ ಹಾಕುತ್ತಿದ್ದರು. ಈಗ ನಾವು ಪಾಕಿಸ್ತಾನದ ಅವರ ಮನೆಗೆ ನುಗ್ಗಿ ಹೊಡೆಯುತ್ತಿದ್ದೇವೆ. ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ'' ಎಂದು ಹೇಳಿದರು. ಇದಕ್ಕೆಲ್ಲ ಮೋದಿಯವರು ಆರ್ಟಿಕಲ್ 370 ತೆಗೆದಿದ್ದೆ ಮೂಲ ಕಾರಣವಾಗಿದೆ. ಇದರಿಂದ ಬಿಜೆಪಿಗೆ 370 ಸ್ಥಾನ ತಾವು ಆರಿಸಿ ಕಳುಹಿಸಬೇಕು. 370ನೇ ವಿಧಿ ರದ್ದುಪಡಿಸಿದ ನರೇಂದ್ರ ಮೋದಿಯವರಿಗೆ 370 ಸ್ಥಾನಗಳ ಗಿಫ್ಟ್ ಕೊಡಬೇಕು ಎಂದು ಮನವಿ ಮಾಡಿದರು.
ಚನ್ನಮ್ಮ ವಿವಿಗೆ 100 ಕೋಟಿ, ಧಾರವಾಡ, ಗುಲ್ಬರ್ಗಾ ವಿವಿಗಳಿಗೆ 20 ಕೋಟಿ ರೂ. ಬಿಡುಗಡೆ: (ಬೆಳಗಾವಿ) ''ಕರ್ನಾಟಕ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಅನೇಕ ವಿಶ್ವ ವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ 3,600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು, ''ಪ್ರಧಾನಮಂತ್ರಿ ಉಷಾ ಯೋಜನೆಯಡಿ 78 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುದಾನ ಬಿಡುಗಡೆ ಮಾಡಿದ್ದಾರೆ. ಉಷಾ ಯೋಜನೆಯಡಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ., ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ಹಾಗೂ ಧಾರವಾಡ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ದೊರೆಯಲಿದೆ'' ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
''ಜಮ್ಮು- ಕಾಶ್ಮೀರ ಸೇರಿದಂತೆ ದೇಶದ ಹಲವಾರು ವಿಶ್ವವಿದ್ಯಾಲಯಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಈ ಅನುದಾನ ಬಿಡುಗಡೆ ಮಾಡಿದ್ದಾರೆ. ಸಾಕ್ಷರತೆಯಿಂದ ಮಾತ್ರ ದೇಶದ ನೈಜ ವಿಕಾಸ ಸಾಧ್ಯ ಎಂದು ನಂಬಿರುವ ಪ್ರಧಾನಿ ಮೋದಿ ಅವರು ದೇಶದ ವಿಶ್ವವಿದ್ಯಾಲಯಗಳಿಗೆ ಹೊಸ ಜೀವ ತುಂಬಲು ಈ ರೀತಿಯ ಮಹತ್ವದ ಯೋಜನೆಗೆ ಚಾಲನೆ ನೀಡಿದ್ದಾರೆ'' ಎಂದು ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
''ಭಾರತದ ಯುವ ಜನತೆಗೆ ಶಿಕ್ಷಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೊಳಿಸಿ ಭಾರತವನ್ನು ವಿಶ್ವಗುರು ಮಾಡುವ ಧ್ಯೇಯ ಪ್ರಧಾನಿಯವರದ್ದಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳ ಅಮೂಲ್ಯ ಜೀವನ ರೂಪಿಸಲು ಪ್ರಧಾನಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ'' ಎಂದು ಹೇಳಿದರು.
''ಜಮ್ಮು ಅಭಿವೃದ್ಧಿಗೆ ಐತಿಹಾಸಿಕ ಕ್ರಮ ಕೈಗೊಳ್ಳಲಾಗಿದೆ. ಜಮ್ಮು- ಕಾಶ್ಮೀರ ಎಂದರೆ ಹಿಂಸಾಚಾರ, ಭಯೋತ್ಪಾದನೆಯೇ ಎಲ್ಲರ ಮನದಲ್ಲಿ ಹಾದು ಹೋಗುತ್ತಿತ್ತು. ಆದರೆ ಇದೀಗ ಸಂಪೂರ್ಣ ಬದಲಾಗಿದ್ದು, ಅಭಿವೃದ್ಧಿ ಪರ್ವ ಆರಂಭವಾಗಿದೆ. ವಿಶ್ವವಿದ್ಯಾಲಯಗಳ ಅನುದಾನ ಬಿಡುಗಡೆ ಸೇರಿದಂತೆ ಜಮ್ಮುವಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ'' ಎಂದರು. ಈ ವೇಳೆ, ಸಂಸದೆ ಮಂಗಲಾ ಅಂಗಡಿ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಸೋನಿಯಾ ಗಾಂಧಿ, ನಡ್ಡಾ, ವೈಷ್ಣವ್ ಸೇರಿ 41 ಮಂದಿ ರಾಜ್ಯಸಭೆಗೆ ಅವಿರೋಧ ಆಯ್ಕೆ