ಬೆಂಗಳೂರು: ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಗೆ ಸೇರಿದ ದೊಡ್ಡಗೊಲ್ಲಹಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಫಾಕ್ಸ್‌ಕಾನ್ ಕಂಪನಿಗೆ ಭೂಮಿ ಮಂಜೂರಾಗಿದ್ದು, ಸಂಬಂಧಿಸಿದ ಭೂ ಪರಿಹಾರವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲಾಗುವುದು ಎಂದು ಕೆಐಎಡಿಬಿ ಸಿಇಒ ಡಾ.ಮಹೇಶ ತಿಳಿಸಿದ್ದಾರೆ.
ಈ ಗ್ರಾಮಗಳಲ್ಲಿ ಕಂಪನಿಗೆ ಮಂಜೂರಾಗಿರುವ ಭೂಮಿಗೆ ಭೂಸ್ವಾಧೀನ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಹಕಾರ ಪಡೆದು ಫೆನ್ಸಿಂಗ್ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ದೇವನಹಳ್ಳಿ 3ನೇ ಅಡಿಷನಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ನೇರವಾಗಿ ಖಾತೆದಾರರಿಗೆ ಪರಿಹಾರ ಕೊಡಬಾರದೆಂದು ತಡೆಯಾಜ್ಞೆ ನೀಡಿದೆ. ಹೀಗಾಗಿ, ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲಾಗುತ್ತದೆ ಎಂದು ಹೇಳಿದರು.
ಕುಂದಾಣ ಹೋಬಳಿಯ ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ ಮತ್ತು ಬೈರದೇನಹಳ್ಳಿ ಗ್ರಾಮಗಳಲ್ಲಿ ಒಟ್ಟು 867.37 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಈ ಪೈಕಿ ಫಾಕ್ಸ್‌ಕಾನ್ ಕಂಪನಿಗೆ 300 ಎಕರೆ ಭೂಮಿ ಹಂಚಿಕೆ ಮಾಡಲಾಗಿದೆ ಎಂದು ವಿವರ ನೀಡಿದರು.
ದೊಡ್ಡಗೊಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 91/1, 80/3, 92, 98/1, 98/2, 98/4, 93, 8/3, 76, 81/1, 87/4ಪಿ, 90/1 ಮತ್ತು ಚಪ್ಪರದಹಳ್ಳಿ ಗ್ರಾಮದ ಸ.ನಂ.4ಗಳಲ್ಲಿ ಕಂಪನಿಯ ವತಿಯಿಂದ ಫೆನ್ಸಿಂಗ್ ಹಾಕಲು ಹೋದಾಗ ಖಾತೆದಾರರು ಪ್ರತಿಭಟನೆ ನಡೆಸಿ ಫೆನ್ಸಿಂಗ್ ಹಾಕಲು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ರೇಸ್ ಕೋರ್ಸ್ನಲ್ಲಿ ಅಕ್ರಮ ಬೆಟ್ಟಿಂಗ್ ಆರೋಪ: ಪ್ರಕರಣ ರದ್ಧತಿಗೆ ಹೈಕೋರ್ಟ್ ನಕಾರ - Illegal Betting Case