ಬೆಳಗಾವಿ: ಗಲಭೆಪೀಡಿತ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ಅಲ್ಲಿಗೆ ವಿದ್ಯಾಭ್ಯಾಸಕ್ಕೆ ತೆರಳಿದ್ದ ಬೆಳಗಾವಿಯ 25 ವೈದ್ಯಕೀಯ ವಿದ್ಯಾರ್ಥಿಗಳು ಕಳೆದ ನಾಲ್ಕು ದಿನಗಳ ಹಿಂದೆಯೇ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ಸಂಸದ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನೆರವಿನಿಂದ ವಿದ್ಯಾರ್ಥಿಗಳು ಸುರಕ್ಷಿತವಾಗಿ ತವರಿಗೆ ಮರಳಿದ್ದು, ಆತಂಕದಲ್ಲಿದ್ದ ಪೋಷಕರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಊಟಕ್ಕೂ ಪರದಾಟ: ಬಾಂಗ್ಲಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿ ನೇಹಲ್ ಸವಣೂರು ಪ್ರತಿಕ್ರಿಯಿಸಿ, "ನಾವು ಬಾಂಗ್ಲಾದಲ್ಲೇ ಉಳಿದುಕೊಂಡಿದ್ದರೆ, ರೂಮ್ನಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿದ್ದರು. ಅಲ್ಲಿ ನಾವು ಸಾಕಷ್ಟು ನೋವು ಅನುಭವಿಸಿದೆವು. ಎಲ್ಲ ಕಡೆಯೂ ಕರ್ಫ್ಯೂ ಇತ್ತು. ಊಟಕ್ಕೂ ಪರದಾಡಬೇಕಾಯಿತು. ಎರಡೇ ನಿಮಿಷದಲ್ಲಿ ತಿನ್ನೋಕೆ ಏನಾದರೂ ತಂದು ರೂಮ್ ಸೇರುತ್ತಿದ್ದೆವು" ಎಂದರು.
"ಇನ್ನು ಲೇಡಿಸ್ ಹಾಸ್ಟೆಲ್ ಹತ್ತಿರ ಬಹಳಷ್ಟು ಸಮಸ್ಯೆಗಳು ಇದ್ದವು. ಅಲ್ಲಿ ಊಟವೂ ಇರಲಿಲ್ಲ. ನೆಟ್ವರ್ಕ್ ಕೂಡ ಇರಲಿಲ್ಲ. ಹಾಗಾಗಿ, ಪೋಷಕರ ಜೊತೆಗೆ ಮಾತನಾಡಲೂ ಆಗಲಿಲ್ಲ. ಬಾಂಗ್ಲಾದಲ್ಲಿ ನಾನೂ ಭಯಭೀತನಾಗಿದ್ದೆ. ಈಗಿನ ಪರಿಸ್ಥಿತಿ ಇನ್ನೂ ಭಯಂಕರವಾಗಿದೆ. ಹೇಗೋ ಗಲಭೆಪೀಡಿತ ದೇಶದಿಂದ ಬಚಾವ್ ಆಗಿ ಮನೆಗೆ ಮರಳಿ ಬಂದಿದ್ದೇವೆ" ಎಂದು ನೇಹಲ್ ಸವಣೂರು ಹೇಳಿದರು.