ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ವಸ್ಥರ ಸಂಖ್ಯೆ ಇದೀಗ 33ಕ್ಕೆ ಏರಿಕೆಯಾಗಿದೆ. ಗ್ರಾಮದಲ್ಲಿ ಅಸ್ವಸ್ಥರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಅಸ್ವಸ್ಥರಿಗೆ ಚನ್ನಗಿರಿ ತಾಲೂಕು ಆಸ್ಪತ್ರೆ, ಶಿವಮೊಗ್ಗ, ಭದ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಜೋಳದಾಳ್ ಗ್ರಾಮದಲ್ಲಿ ಆರೋಗ್ಯ ಇಲಾಖೆ ಮೊಕ್ಕಾಂ ಹೂಡಿದ್ದು, ತುರ್ತು ಆಸ್ಪತ್ರೆ ತೆರೆಯಲಾಗಿದೆ. ಗ್ರಾಮದ ಎಲ್ಲ ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಕಲುಷಿತ ನೀರಿನಲ್ಲಿ ಕಾಲರಾ ಇರೋ ಶಂಕೆ ವ್ಯಕ್ತವಾಗಿದ್ದು, ಜೋಳದಾಳ್ ಗ್ರಾಮದ ನೀರನ್ನು ಸಂಗ್ರಹಿಸಿ ಪರೀಕ್ಷೆ ಮಾಡಲು 9 ನೀರಿನ ಮಾದರಿ ಲ್ಯಾಬ್ಗೆ ಕಳುಹಿಸಲಾಗಿದೆ. ಆರೋಗ್ಯ ಇಲಾಖೆ ಗ್ರಾಮದ ಎಲ್ಲರ ಆರೋಗ್ಯದ ಮೇಲೆ ನಿಗಾ ವಹಿಸಿದೆ. ಸದ್ಯ ಗ್ರಾಮದ ಜನರು ಆತಂಕದಲ್ಲಿದ್ದಾರೆ. ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ, ಸಿಇಓ ಸುರೇಶ್ ಇಟ್ನಾಳ್, ಡಿಹೆಚ್ಓ ಷಣ್ಮುಖಪ್ಪ ಗ್ರಾಮಕ್ಕೆ ಭೇಟಿ ನೀಡಿ ಮೊಕ್ಕಾಂ ಹೂಡಿದ್ದಾರೆ.
ಡಿಹೆಚ್ಓ ಷಣ್ಮುಖಪ್ಪ ಹೇಳಿದ್ದೇನು? : ಜೋಳದಾಳ್ ಗ್ರಾಮದಲ್ಲಿ ನಡೆದ ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಹೆಚ್ಓ ಡಾ.ಎಸ್ ಷಣ್ಮುಖಪ್ಪ ಈಟಿವಿ ಭಾರತ ಜೊತೆ ಮಾತನಾಡಿ, "ಜೋಳದಾಳ್ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ಕಂಡುಬಂದಿವೆ. ತಕ್ಷಣ ನಮ್ಮ ಜಿಲ್ಲಾ ಸರ್ವೇಕ್ಷಣ ಇಲಾಖೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. 33 ವಾಂತಿ-ಭೇದಿ ಪ್ರಕರಣಗಳು ಪತ್ತೆಯಾಗಿವೆ. ಚನ್ನಗಿರಿ, ಭದ್ರಾವತಿ, ಶಿವಮೊಗ್ಗ ಆಸ್ಪತ್ರೆಗಳಲ್ಲಿ ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪ್ರಕರಣಗಳು ಪತ್ತೆ ಆಗ್ತಿದ್ದು, ಹೆಚ್ಚಾಗುವ ಸಾಧ್ಯತೆ ಇದೆ. ಆಸ್ಪತ್ರೆ ತೆರೆದು ತೀವ್ರ ನಿಗಾ ವಹಿಸಲಾಗಿದೆ. ಸೀರಿಯಸ್ ಪ್ರಕರಣಗಳು ಕಂಡುಬಂದಿಲ್ಲ. ಮುಂಜಾಗ್ರತಾ ಕ್ರಮ ವಹಿಸಿ ನೀರಿನ ಸ್ಯಾಂಪಲ್ ಪಡೆಯಲಾಗಿದ್ದು, ಪರಿಶೀಲನೆ ನಡೆಸಲಾಗಿದೆ'' ಎಂದರು.
ಇದನ್ನೂ ಓದಿ: ದಾವಣಗೆರೆ: ವಾಂತಿ–ಭೇದಿಯಿಂದ ಏಳು ಜನ ಅಸ್ವಸ್ಥ, ಆಸ್ಪತ್ರೆಯಲ್ಲಿ ಓರ್ವ ಮಹಿಳೆ ಸಾವು - vomiting and dysentery