ಮಂಗಳೂರು: ನಗರದ ಜೋಕಟ್ಟೆಗೆ ಚಿಕಿತ್ಸೆಗೆಂದು ಬೆಳಗಾವಿಯಿಂದ ಬಂದಿದ್ದ 13 ವರ್ಷದ ಬಾಲಕಿಯನ್ನು ಹತ್ಯೆ ಮಾಡಲಾಗಿದೆ. ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಘಟನೆ ನಡೆದಿದೆ.
ಬೆಳಗಾವಿಯ ಹನುಮಂತ ಎಂಬವರು ತಮ್ಮನ ಮಗಳ ಕೈ ನೋವಿಗೆ ಚಿಕಿತ್ಸೆ ಒದಗಿಸಲು ತಮ್ಮ ಮನೆಯಲ್ಲಿ ಆಕೆಯನ್ನು ಇರಿಸಿಕೊಂಡಿದ್ದರು. ಇಂದು ಜೋಕಟ್ಟೆಯ ಬಾಡಿಗೆ ಮನೆಯಿಂದ ಮನೆಮಂದಿ ಕೆಲಸಕ್ಕೆ ಹೋದ ನಂತರ ಹತ್ಯೆ ನಡೆದಿದೆ.
ಬೆಳಿಗ್ಗೆ 10.30ರ ಸುಮಾರಿಗೆ ಬಾಲಕಿಯ ತಾಯಿ ಪಕ್ಕದ ಮನೆಯವರಿಗೆ ಕರೆ ಮಾಡಿ ಬಾಲಕಿಗೆ ಫೋನ್ ಕೊಡಲು ತಿಳಿಸಿದ್ದರು. ಅದರಂತೆ ಫೋನ್ ಕೊಡಲು ಬಾಡಿಗೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಬಾಲಕಿಯ ತಾಯಿ ಹನುಮಂತ ಅವರಿಗೆ ಫೋನ್ ಮೂಲಕ ಮನೆಗೆ ಹೋಗುವಂತೆ ತಿಳಿಸಿದ್ದಾರೆ. ಅವರು ತಕ್ಷಣ ಮನೆಗೆ ಬಂದು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್, ಡಿಸಿಪಿ ದಿನೇಶ್ ಕುಮಾರ್, ಉತ್ತರ ಉಪ ವಿಭಾಗದ ಅಧಿಕಾರಿಗಳು ಮತ್ತು ಪಣಂಬೂರು ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲ ಆರೋಪಿಗಳು ಖುಲಾಸೆ - Mangaluru Homestay Attack Case