ಬೆಂಗಳೂರು: ರಾಜಧಾನಿಯಲ್ಲಿ ಜಾಮೀನು ಮಾಫಿಯಾ ಸಕ್ರಿಯವಾಗಿದೆ. ನಕಲಿ ದಾಖಲಾತಿ ಸಲ್ಲಿಸಿ ಆರೋಪಿಗಳಿಗೆ ಜಾಮೀನು ನೀಡುತ್ತಿದ್ದ 13 ಮಂದಿ ನಕಲಿ ಜಾಮೀನುದಾರರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಮ್ಯಾಜಿಸ್ಟ್ರೇಟ್, ಸಿಟಿ ಸಿವಿಲ್ ಸೇರಿದಂತೆ ಇನ್ನಿತರ ನ್ಯಾಯಾಲಯಗಳಿಗೆ ನಕಲಿ ದಾಖಲಾತಿ ನೀಡಿ ಆರೋಪಿಗಳಿಗೆ ಜಾಮೀನುದಾರರಾಗಿದ್ದ ಮಂಜುನಾಥ್, ಆನಂದ್, ಇಂದ್ರೇಶ್, ದೊಡ್ಡಯ್ಯ, ಚಂದ್ರಶೇಖರ್, ಸಂತೋಷ್ ಕುಮಾರ್, ದಾದಾ ಹಯಾತ್ ಖಲಂದರ್, ಸ್ವರೂಪ್, ಮನೋಜ್, ಆನಂದ್ ಕುಮಾರ್, ಕೆಂಪೇಗೌಡ ಹಾಗೂ ವಿನಾಯಕ್ ಎಂಬವರನ್ನು ಬಂಧಿಸಲಾಗಿದೆ.
ಇವರಿಂದ 139 ವಿವಿಧ ಹೆಸರುಗಳು ಹಾಗೂ ಆಧಾರ್ ಕಾರ್ಡ್ಗಳು, 43 ಪಡಿತರ ಚೀಟಿ, 16 ಪ್ಯಾನ್ ಕಾರ್ಡ್, ವಿವಿಧ ಹೆಸರಿನ 35 ಜಮೀನಿನ ಪಹಣಿ ಪತ್ರ, ಮ್ಯೂಟೇಷನ್ ಪ್ರತಿಗಳು ಹಾಗೂ 13 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕೃತ್ಯದಲ್ಲಿ ಹಲವರು ಭಾಗಿಯಾಗಿದ್ದು, ಶೋಧ ಕಾರ್ಯ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗೊತ್ತಾಗಿದ್ದು ಹೇಗೆ?: ನಗರದ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಈ ಆರೋಪಿಗಳು ನಕಲಿ ದಾಖಲಾತಿ ಇಟ್ಟುಕೊಂಡು ಶ್ಯೂರಿಟಿ ನೀಡಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ, ನಕಲಿ ಜಾಮೀನು ಮಾಫಿಯಾ ಬೆಳಕಿಗೆ ಬಂದಿದೆ.
ಆರೋಪಿ ಮಂಜುನಾಥ್ ಸೇರಿ ಇನ್ನಿತರರು ಹಲವು ವರ್ಷಗಳಿಂದ ದಂಧೆಯಲ್ಲಿ ಭಾಗಿಯಾಗಿದ್ದರು. ಇದುವರೆಗೆ ಸುಮಾರು 40ಕ್ಕಿಂತ ಹೆಚ್ಚು ಆರೋಪಿಗಳಿಗೆ ನಕಲಿ ಜಾಮೀನು ನೀಡಿರುವುದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಧೆ ನಡೆಯುವುದು ಹೀಗೆ: ಗಾಂಧಿನಗರ ಕಚೇರಿಯಲ್ಲಿ ವ್ಯವಸ್ಥಿತವಾಗಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳು ಅಸಲಿ ಆಸ್ತಿ ಮಾಲೀಕರ ವಿವರವನ್ನು ಕಂದಾಯ ಇಲಾಖೆಯ ಭೂಮಿ ಜಾಲತಾಣದಲ್ಲಿ ಪಡೆಯುತ್ತಿದ್ದರು. ಸರ್ವೇ ನಂಬರ್, ಮನೆ ವಿಳಾಸ ಸೇರಿದಂತೆ ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದರು. ನಕಲಿ ಆಧಾರ್ ಕಾರ್ಡ್ನಲ್ಲಿ ಆರೋಪಿಯ ಭಾವಚಿತ್ರ, ನಕಲಿ ಸಂಖ್ಯೆ ಹಾಗೂ ಅಸಲಿ ಮಾಲೀಕರ ವಿಳಾಸ ಹಾಕುತ್ತಿದ್ದರು. ಅಲ್ಲದೇ, ಪಹಣಿ ಪತ್ರವನ್ನೂ ಇದೇ ಮಾದರಿಯಲ್ಲಿ ನಕಲಿಸುತ್ತಿದ್ದರು. ಬ್ಯಾಂಕ್ ಲೋನ್ ತೆಗೆದುಕೊಳ್ಳದ ಆಸ್ತಿ ಮಾಲೀಕರ ಪಹಣಿ ಪತ್ರವನ್ನು ಗುರಿಯಾಗಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಒಂದು ನಕಲಿ ಜಾಮೀನಿಗೆ ₹5 ಸಾವಿರ: ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುವ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದಾಗ ಶ್ಯೂರಿಟಿ ಒದಗಿಸುವುದು ಕಡ್ಡಾಯ. ಆರೋಪಿಗಳಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬರದಿದ್ದಾಗ ಇದನ್ನರಿತು ಸಂಪರ್ಕಿಸುತ್ತಿದ್ದ ಆರೋಪಿಗಳು ನ್ಯಾಯಾಲಯಕ್ಕೆ ನಕಲಿ ದಾಖಲಾತಿ ಸಲ್ಲಿಸಿ ವಂಚಿಸುತ್ತಿದ್ದರು. ಒಂದು ಫೇಕ್ ಶ್ಯೂರಿಟಿಗೆ ಸುಮಾರು 5 ಸಾವಿರ ರೂ ಪಡೆಯುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.