ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಿರುವ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಅತಿ ವೇಗವಾಗಿ 1 ಸಾವಿರ ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಬರೆದರು. ಈ ಮೂಲಕ ಮಾಜಿ ಆಟಗಾರ ವಿನೋದ್ ಕಾಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದರು.
ಧರ್ಮಶಾಲಾದಲ್ಲಿ ನಡೆಯುತ್ತಿರುವ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ 29 ರನ್ ಗಳಿಸಿದ್ದಾಗ ಟೆಸ್ಟ್ ಕ್ರಿಕೆಟ್ನಲ್ಲಿ 1 ಸಾವಿರ ರನ್ ಗಡಿ ಮುಟ್ಟಿದರು. ಇದು ಅವರ 9 ಪಂದ್ಯಗಳ 16 ಇನಿಂಗ್ಸ್ಗಳಲ್ಲಿ ಈ ಸಾಧನೆ ಮೂಡಿಬಂದಿದೆ. ಇಷ್ಟೇ ಪಂದ್ಯವಾಡಿರುವ ವಿನೋದ್ ಕಾಂಬ್ಳೆ 14 ಇನಿಂಗ್ಸ್ಗಳಲ್ಲಿ ಸಾವಿರ ರನ್ ಅತಿ ವೇಗವಾಗಿ ರನ್ ಗಳಿಸಿದ ಮೊದಲ ಆಟಗಾರರಾಗಿದ್ದಾರೆ. 18 ಇನಿಂಗ್ಸ್ಗಳಲ್ಲಿ ಚೇತೇಶ್ವರ್ ಪೂಜಾರ ಈ ಸಾಧನೆ ಮಾಡಿದ ನಂತರದ ಭಾರತೀಯರಾಗಿದ್ದಾರೆ.
-
🚨 Milestone 🔓
— BCCI (@BCCI) March 7, 2024
1⃣0⃣0⃣0⃣ Test runs and counting 🙌
Follow the match ▶️ https://t.co/jnMticF6fc #TeamIndia | #INDvENG | @ybj_19 | @IDFCFIRSTBank pic.twitter.com/mjQ9OyOeQF
ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಕೆಲವೇ ದಿನಗಳಲ್ಲಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಜೈಸ್ವಾಲ್ 5ನೇ ಸ್ಥಾನ ಪಡೆದರು. ಟೆಸ್ಟ್ ಕ್ಯಾಪ್ ಪಡೆದ 239 ದಿನಗಳಲ್ಲಿ 1 ಸಾವಿರ ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ಮೈಕ್ ಹಸ್ಸಿ ಕೇವಲ 166 ದಿನಗಳಲ್ಲಿ ಈ ಸಾಧನೆ ಮಾಡಿದ್ದರು. ಮಾಜಿ ಆಟಗಾರ ರಾಹುಲ್ ದ್ರಾವಿಡ್ 299 ದಿನ ತೆಗೆದುಕೊಂಡಿದ್ದರು.
ಅತಿ ಕಿರಿಯ ಬ್ಯಾಟರ್: ಇನ್ನೂ, ಈ ಸಾಧನೆ ಮಾಡಿದ ಅತಿ ಕಿರಿಯ ಬ್ಯಾಟರ್ಗಳಲ್ಲಿ ಒಬ್ಬರು ಎಂಬ ಹಿರಿಮೆಗೂ ಪಾತ್ರರಾದರು. ಜೈಸ್ವಾಲ್ಗೆ ಸದ್ಯ 22 ವರ್ಷ 70 ದಿನಗಳಿದ್ದರೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 19 ವರ್ಷ 217 ದಿನಗಳಿದ್ದಾಗ ಈ ದಾಖಲೆ ಬರೆದಿದ್ದರು. ಬಳಿಕ ಕಪಿಲ್ ದೇವ್ (21 ವರ್ಷ 27 ದಿನ), ರವಿಶಾಸ್ತ್ರಿ (21 ವರ್ಷ 197 ದಿನ) ಇದ್ದಾರೆ.
700 ರನ್ ಗಳಿಸಿದ ಎರಡನೇ ಬ್ಯಾಟರ್: ಜೈಸ್ವಾಲ್ ಸರಣಿಯಲ್ಲಿ 700 ರನ್ ಗಡಿ ದಾಟಿದ್ದು, ಒಂದೇ ತಂಡದ ವಿರುದ್ಧ ಒಂದೇ ಸರಣಿಯಲ್ಲಿ ಇಷ್ಟು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಜೈಸ್ವಾಲ್ ಬರೆದರು. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ 712 ರನ್ ಗಳಿಸಿದ್ದಾರೆ. ಇನ್ನೊಂದು ಇನಿಂಗ್ಸ್ ಬಾಕಿ ಇದೆ. ಇದಕ್ಕೂ ಮೊದಲು ಲಿಟಲ್ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್ ಎರಡು ಬಾರಿ ಸರಣಿಯೊಂದರಲ್ಲಿ 700 ಅಧಿಕ ರನ್ ಗಳಿಸಿದ್ದಾರೆ. 1971 ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ 774 ರನ್, 1978-79 ರಲ್ಲಿ ಅದೇ ತಂಡದ ವಿರುದ್ಧ 732 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ 692 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: 5ನೇ ಟೆಸ್ಟ್: ಕುಲದೀಪ್ ಯಾದವ್ಗೆ 5 ವಿಕೆಟ್ ಗೊಂಚಲು, ಇಂಗ್ಲೆಂಡ್ 218ಕ್ಕೆ ಆಲೌಟ್