ಹೈದರಾಬಾದ್: ಮಹಿಳಾ ಟಿ20 ವಿಶ್ವಕಪ್‌ನ 7ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಗೆಲುವಿನ ಖಾತೆ ತೆರೆದಿದೆ. ಈ ಗೆಲುವಿನೊಂದಿಗೆ ಸೆಮಿಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆದ್ರೆ ಭಾರತದ ವನಿತೆಯರ ಸೆಮಿಸ್ ಹಾದಿ ಸುಲಭವಾಗಿಲ್ಲ. ಏಕೆಂದರೇ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 58 ರನ್ ಗಳಿಂದ ಹೀನಾಯ ಸೋಲನ್ನು ಕಂಡಿದ್ದ ಟೀಮ್ ಇಂಡಿಯಾ ರನ್ ರೇಟ್ನಲ್ಲೂ ಹಿನ್ನಡೆ ಅನುಭವಿಸಿತ್ತು.
ಇದೀಗ ಪಾಕ್ ವಿರುದ್ಧ 6 ವಿಕೆಟ್‌ಗಳ ಜಯ ದಾಖಲಿ ರನ್ರೇಟ್ನಲ್ಲಿ ಕೊಂಚ ಸುಧಾರಿಸಿದರೂ ಇದು ಸೆಮಿಸ್ಗೆ ಪ್ರವೇಶಿಸಲು ಸಾಕಾಗುವುದಿಲ್ಲ. ಹಾಗಾದ್ರೆ ಟೀಮ್ ಇಂಡಿಯಾ ಸೆಮಿಸ್ಗೆ ಪ್ರವೇಶಿಸಲು ಮುಂದಿನ ಪಂದ್ಯಗಳನ್ನು ಎಷ್ಟು ಅಂತರದಿಂದ ಗೆಲ್ಲಬೇಕು ಮತ್ತು ಎಷ್ಟು ಪಂದ್ಯಗಳು ಉಳಿದಿವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಸೆಮಿಸ್ ಲೆಕ್ಕಾಚಾರ: ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದರೂ ಭಾರತದ ನಿವ್ವಳ ರನ್ ರೇಟ್ ಅಷ್ಟಾಗಿ ಸುಧಾರಿಸಲಿಲ್ಲ. ಪಾಯಿಂಟ್ ಪಟ್ಟಿಯಲ್ಲಿ ಭಾರತವು ಪಾಕ್ಗಿಂತಲೂ ಕೆಳಗಿದೆ. ಎ ಗುಂಪಿನಲ್ಲಿ ನ್ಯೂಜಿಲೆಂಡ್ (+2.900), ಆಸ್ಟ್ರೇಲಿಯಾ (+1.908) ಮತ್ತು ಪಾಕಿಸ್ತಾನ (+0.555) ತಲಾ 2 ಅಂಕಗಳನ್ನು ಹೊಂದಿವೆ. ಭಾರತದ ಖಾತೆಗೂ 2 ಅಂಕ ಸೇರ್ಪಡೆಯಾಗಿದೆ. ಆದರೆ, ನೆಟ್ ರನ್ ರೇಟ್ನಲ್ಲಿ ಟೀಂ ಇಂಡಿಯಾ ಎಲ್ಲಾ ಮೂರು ತಂಡಗಳಿಗಿಂತ ಹಿಂದಿದೆ.
ಎ ಮತ್ತು ಬಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಸದ್ಯ ಭಾರತ ಎ ತಂಡದಲ್ಲಿದ್ದು ಗ್ರೂಪ್ ಹಂತದಲ್ಲಿ ಎರಡು ಪಂದ್ಯಗಳು ಬಾಕಿಯಿವೆ. ಸೆಮಿಫೈನಲ್ ತಲುಪಲು ಆ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಮುಂದಿನ ಪಂದ್ಯಗಳಲ್ಲಿ ಭಾರತ ತಂಡ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಭಾರತ ಭಾರಿ ಅಂತರದಿಂದ ಗೆಲುವು ಸಾಧಿಸಬೇಕು. ಆದರೆ ಆಸೀಸ್ ಬಲಿಷ್ಠ ತಂಡವಾಗಿರುವ ಕಾರಣ ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿ ರನ್ ರೇಟ್ ಸುಧಾರಿಸಿಕೊಳ್ಳಬೇಕಿದೆ.
ಮುಂದಿನ ಎರಡು ಪಂದ್ಯಗಳಲ್ಲಿ ಒಂದರಲ್ಲೂ ಸೋತರು ಸೆಮಿಸ್ ಬಾಗಿಲು ಬಹುತೇಕ ಮುಚ್ಚಿಕೊಳ್ಳಲಿವೆ. ಒಂದು ವೇಳೆ ಹೀಗಾದಾರೆ ನ್ಯೂಜಿಲೆಂಡ್ ತನ್ನ ಮುಂದಿನ ಎರಡು ಮತ್ತು ಪಾಕಿಸ್ತಾನ ಒಂದು ಪಂದ್ಯದಲ್ಲಿ ಸೋಲನುಭವಿಸಬೇಕು ಆಗ ಭಾರತ ಸೆಮಿಸ್ ಪ್ರವೇಶಿಸುವ ಸಾಧ್ಯತೆ ಇರಲಿದೆ. ಹಾಗಾಗಿ ಶ್ರೀಲಂಕಾ ವಿರುದ್ಧದ ಮುಂದಿನ ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಿದ್ದು, ರನ್ ರೇಟ್ ಸುಧಾರಿಸಲು ಇದೊಂದು ಉತ್ತಮ ಅವಕಾಶವಾಗಿದೆ.
ಗ್ರೂಪ್ ಎ ಅಂಕಪಟ್ಟಿ
ತಂಡ | ಅಂಕ | ರನ್ರೇಟ್ |
ನ್ಯೂಜಿಲೆಂಡ್ | 2 | +2.900 |
ಆಸ್ಟ್ರೇಲಿಯಾ | 2 | +1.908 |
ಪಾಕಿಸ್ತಾನ | 2 | +0.555 |
ಭಾರತ | 2 | -1.217 |
ಶ್ರೀಲಂಕಾ | 0 | -1.667 |
ಇದನ್ನೂ ಓದಿ: ಶ್ರೀಲಂಕಾ ತಂಡದ ಮುಖ್ಯಕೋಚ್ ಆಗಿ ಸನತ್ ಜಯಸೂರ್ಯ ನೇಮಕ - Sanath Jayasuriya