ಹೈದರಾಬಾದ್: ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಮುಂದಿನ ತಿಂಗಳು ನಡೆಯುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸ್ಥಾನ ಪಡೆದರೆ, ಯುವ ಆಟಗಾರರಾದ ಶಿವಂ ದುಬೆ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಅವರ ಭಾಗ್ಯದ ಬಾಗಿಲು ತೆರೆದಿದೆ.
ಅವಕಾಶಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದ ರಿಂಕು ಸಿಂಗ್, ಋತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್, ಶುಭ್ಮನ್ ಗಿಲ್ ಸೇರಿದಂತೆ ಹಲವು ಯುವ ಕ್ರಿಕೆಟರ್ಗಳು ನಿರಾಸೆ ಅನುಭವಿಸಿದ್ದಾರೆ. ಈ ಪೈಕಿ ಕೆಲವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಟೀಂ ಕಟ್ಟುವಾಗ ಆಯ್ಕೆ ಸಮಿತಿ ಎಡವಿದೆ ಎಂಬ ಟೀಕೆ ಕೇಳಿಬಂದಿದೆ.
ಈ ಮಧ್ಯೆ ಐಪಿಎಲ್ ಹಂಗಾಮ ನಡೆಯುತ್ತಿದ್ದು, ಇಲ್ಲಿ ಆಟಗಾರರು ತೋರಿದ ಪ್ರದರ್ಶನ ಮಾನದಂಡವಾಗಿ ಪರಿಣಮಿಸಿಲ್ಲ ಎಂಬುದು ವಿಧಿತವಾಗುತ್ತಿದೆ. ಹಲವಾರು ಯುವ ಆಟಗಾರರು ಮಿಂಚು ಹರಿಸುತ್ತಿದ್ದಾರೆ. ಆದಾಗ್ಯೂ ಇದ್ಯಾವುದನ್ನೂ ಆಯ್ಕೆಗಾರರು ಪರಿಗಣನೆಗೆ ತೆಗೆದುಕೊಂಡಿಲ್ಲ. ವೆಸ್ಟ್ ಇಂಡೀಸ್ನ ನಿಧಾನಗತಿ ಪಿಚ್ಗೆ ಹೊಂದಿಕೊಂಡು ಆಡುವುದರ ಕಡೆಗೆ ಹೆಚ್ಚಿನ ಗಮನ ಹರಿಸಲಾಗಿದೆ.
ಯಾವ ಐಪಿಎಲ್ ತಂಡಕ್ಕೆ ಹೆಚ್ಚು ಛಾನ್ಸ್?: ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಟೀಂ ಇಂಡಿಯಾ ಆಟಗಾರರು ಐಪಿಎಲ್ನಲ್ಲಿ ತರಹೇವಾರಿ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪೈಕಿ ಮುಂಬೈ ಇಂಡಿಯನ್ಸ್ ತಂಡದಿಂದ ಹೆಚ್ಚು ಆಟಗಾರರು (4) ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದು ವಿಶೇಷ. ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಎಂಐ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಅವಕಾಶ ಪಡೆದವರು.
ಬಳಿಕ ರಾಜಸ್ಥಾನ ರಾಯಲ್ಸ್ನಿಂದ ಮೂವರು ಆಟಗಾರರಾದ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಯಜುವೇಂದ್ರ ಚಹಲ್, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಿಂದ ರಿಷಬ್ ಪಂತ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ವಿರಾಟ್ ಕೊಹ್ಲಿ, ಮೊಹಮದ್ ಸಿರಾಜ್, ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಶಿವಂ ದುಬೆ, ರವೀಂದ್ರ ಜಡೇಜಾ, ಪಂಜಾಬ್ ಕಿಂಗ್ಸ್ನಿಂದ ಅರ್ಷದೀಪ್ ಸಿಂಗ್ ಪ್ರತಿನಿಧಿಸುತ್ತಿದ್ದಾರೆ.
ಅವಕಾಶ ಸಿಗದ ಐಪಿಎಲ್ ತಂಡಗಳು: ಐಪಿಎಲ್ನಲ್ಲಿ ಆಡುತ್ತಿರುವ 10 ತಂಡಗಳ ಪೈಕಿ 6 ತಂಡಗಳ ಆಟಗಾರರಿಗೆ ವಿಶ್ವಕಪ್ನಲ್ಲಿ ಆಡಲು ಅವಕಾಶ ಪಡೆದರೆ, ನಾಲ್ಕು ಫ್ರಾಂಚೈಸಿಗಳಲ್ಲಿ ಒಬ್ಬ ಆಟಗಾರರೂ ಆಯ್ಕೆಗಾರರ ಗಮನ ಸೆಳೆದಿಲ್ಲ. ಅದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್, ಲಖನೌ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್ ತಂಡ ಇವೆ. ಈ ಪೈಕಿ ಕೆಕೆಆರ್ನ ರಿಂಕು ಸಿಂಗ್, ಗುಜರಾತ್ ಟೈಟಾನ್ಸ್ನ ಶುಭ್ಮನ್ಗಿಲ್, ಲಖನೌ ಸೂಪರ್ಜೈಂಟ್ಸ್ನ ಆವೇಶ್ಖಾನ್ ಮೀಸಲು ತಂಡದಲ್ಲಿ ಉಳಿದುಕೊಂಡಿದ್ದಾರೆ.