ಹೈದರಾಬಾದ್: ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಿನ್ನೆ ಬಾಂಗ್ಲಾದೇಶ ಹೀನಾಯ ಅನುಭವಿಸಿತು. ಬಾಂಗ್ಲಾ ಬ್ಯಾಟರ್‌ಗಳು ರನ್ಗಳಿಸಲು ಭಾರಿ ಕಸರತ್ತು ನಡೆಸಿದರೂ ಇಡೀ ಇನ್ನಿಂಗ್ಸ್‌ನಲ್ಲಿ 30 ರನ್‌ಗಳ ಜೊತೆಯಾಟವೇ ದಾಖಲಾಗಲಿಲ್ಲ. ಇದರಿಂದಾಗಿ ತಂಡದ ನಾಯಕ ನಜ್ಮುಲ್ ಶಾಂಟೊ ತಂಡದ ಬ್ಯಾಟಿಂಗ್ ಬಗ್ಗೆ ಅಸಮಾಧಾನ ಹೊರಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಮ್ಮ ಪ್ರದರ್ಶನ ಕೆಟ್ಟದಾಗಿತ್ತು. ಕೆಲವು ಸಮಯದಿಂದ ಟಿ20ಯಲ್ಲಿ ನಮ್ಮ ಪ್ರದರ್ಶನ ಉತ್ತಮವಾಗಿಲ್ಲ. ನಾನು ಯಾವುದೇ ಒಬ್ಬ ಆಟಗಾರನ ಬಗ್ಗೆ ಮಾತನಾಡುತ್ತಿಲ್ಲ. ಆಲೋಚನೆಯಿಂದ ಬ್ಯಾಟಿಂಗ್ ಮಾಡಬೇಕೇ ಹೊರತು ಆಕ್ರಮಣಶೀಲತೆಯಿಂದ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ನಾವು ನಮ್ಮ ಬ್ಯಾಟಿಂಗ್ ಅನ್ನು ಸುದಾರಿಸಿಕೊಂಡರೆ ಉತ್ತಮ ಸ್ಕೋರ್ ಗಳಿಸಬಹುದು. ಆದರೆ ಕಳೆದ 10 ವರ್ಷಗಳಿಂದ ನಾವು ಒಂದೇ ರೀತಿಯಾಗಿ ಬ್ಯಾಟಿಂಗ್ ಮುಂದುವರೆಸಿದ್ದೇವೆ. ತವರಿನಲ್ಲಿ ನಡೆಯುವ ಪಂದ್ಯಗಳಲ್ಲೇ 140ರಿಂದ 150 ಸ್ಕೋರ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಇದರಿಂದಾಗಿ ನಮ್ಮ ಬ್ಯಾಟರ್‌ಗಳಿಗೆ ಪಂದ್ಯದಲ್ಲಿ ಉತ್ತಮ ಪರಿಸ್ಥಿತಿಯಿದ್ದರೂ 180ರನ್ ಗಳಿಸುವುದು ಹೇಗೆಂದು ತಿಳಿಯದಂತಾಗಿದೆ. ನಾನು ಪಿಚ್ ಅನ್ನು ದೂಷಿಸುತ್ತಿಲ್ಲ. ಆದರೆ ನಾವು ನಮ್ಮ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕಿದೆ" ಎಂದು ಹೇಳಿದರು.
ಬಾಂಗ್ಲಾ ಟಿ20 ಪ್ರದರ್ಶನ: ಕಳೆದೆರಡು ವರ್ಷಗಳಲ್ಲಿ ಬಾಂಗ್ಲಾದೇಶ 45 ಟಿ20 ಪಂದ್ಯಗಳನ್ನು ಆಡಿದ್ದು, ನಾಲ್ಕು ಬಾರಿ ಮಾತ್ರ 180 ಸ್ಕೋರ್ ಗಳಿಸಿದೆ. ತವರಿನಲ್ಲಿ ನಡೆದ ಐರ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಎರಡೆರಡು ಬಾರಿ 180 ಸ್ಕೋರ್ ದಾಖಲಿಸಿತ್ತು. ಈ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲೂ ಬಾಂಗ್ಲಾ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಸೂಪರ್8ರಲ್ಲಿ ಆಡಿದ ಎಲ್ಲ ಮೂರು ಪಂದ್ಯಗಳಲ್ಲೂ ಸೋಲು ಕಂಡಿದ್ದರು.