ಅಹಮದಾಬಾದ್ (ಗುಜರಾತ್): ಟೆಸ್ಟ್, ಏಕದಿನ, ಟಿ-20 ಯಾವುದೇ ಆಗಿರಲಿ ಅಲ್ಲಿ ವಿರಾಟ್ ಕೊಹ್ಲಿ ರನ್ಗೆ ಬರ ಇಲ್ಲ. ಮೂರೂ ಪ್ರಕಾರಗಳಲ್ಲಿ ರಾಶಿ ರಾಶಿ ರನ್ ಕಲೆ ಹಾಕಿರುವ ಬ್ಯಾಟಿಂಗ್ ಕಿಂಗ್ ದಾಖಲೆಯ ಸಾಲಿಗೆ ಮತ್ತೊಂದು ವಿಕ್ರಮ ಬಂದು ಸೇರಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ 8 ಸಾವಿರ ರನ್ ಪೂರೈಸಿದ್ದು, ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೊದಲ ಆವೃತ್ತಿಯಿಂದಲೂ ಆರ್‌ಸಿಬಿ ಪರವಾಗಿ ಆಡುತ್ತಿರುವ ವಿರಾಟ್, ಒಂದೇ ಫ್ರಾಂಚೈಸಿಯ ಪರವಾಗಿ ಇಷ್ಟು ರನ್ ದಾಖಲಿಸಿದ ಮೊದಲ ಆಟಗಾರ ಕೂಡ ಹೌದು. ಬುಧವಾರ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.
ಪಂದ್ಯದಲ್ಲಿ 29ನೇ ರನ್ ಗಳಿಸಿದ್ದಾಗ ಐಪಿಎಲ್ನಲ್ಲಿ 8 ಸಾವಿರ ರನ್ ಶಿಖರ ಮುಟ್ಟಿದರು. ಅವರು ಈ ಮೈಲಿಗಲ್ಲು ಸಾಧಿಸಲು 252 ನೇ ಪಂದ್ಯ ಮತ್ತು 244ನೇ ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು ಕೊಹ್ಲಿ 251 ಪಂದ್ಯದ 243 ಇನ್ನಿಂಗ್ಸ್‌ಗಳಲ್ಲಿ 7,971 ರನ್ ಗಳಿಸಿದ್ದರು. ಅತಿ ಹೆಚ್ಚು ಅಂದರೆ 8 ಶತಕ ಬಾರಿಸಿದ್ದರೆ, 55 ಅರ್ಧಶತಕ ಇವರ ಖಾತೆಯಲ್ಲಿವೆ. ಹಣದ ಹೊಳೆಯ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 62 ಫಿಫ್ಟಿ ಬಾರಿಸಿದ್ದು, ಮೊದಲ ಸ್ಥಾನದಲ್ಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ 700 ಬೌಂಡರಿ ದಾಖಲೆ ಬರೆದಿದ್ದರು. ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ (768) ನಂತರ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬೌಂಡರಿಗಳನ್ನು ಬಾರಿಸಿದ ಎರಡನೇ ಕ್ರಿಕೆಟಿಗ ಎನಿಸಿಕೊಂಡರು. ಜೊತೆಗೆ ಒಂದೇ ಮೈದಾನದಲ್ಲಿ (ಚಿನ್ನಸ್ವಾಮಿ ಕ್ರೀಡಾಂಗಣ) 3 ಸಾವಿರ ರನ್ ಗಳಿಸಿದ ಏಕೈಕ ಬ್ಯಾಟರ್ ಕೂಡ ಆಗಿದ್ದಾರೆ.
ಒಂದೇ ಫ್ರಾಂಚೈಸಿ ಪರ ದಾಖಲೆ: ವಿರಾಟ್ ಐಪಿಎಲ್ನಲ್ಲಿ ದಾಖಲೆಗಳ ಸರಮಾಲೆಯೇ ಪೋಣಿಸಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 35 ವರ್ಷ ಆಟಗಾರ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿ ಪರವಾಗಿ 250 ಪಂದ್ಯಗಳನ್ನು ಆಡಿದ ಏಕೈಕ ಆಟಗಾರರಾದರು. ಐಪಿಎಲ್ನಲ್ಲಿ 250ಕ್ಕೂ ಅಧಿಕ ಪಂದ್ಯವಾಡಿದ 4ನೇ ಆಟಗಾರ ಕೂಡ ಹೌದು. 264 ಪಂದ್ಯವಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಗ್ರಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ 256, ಆರ್ಸಿಬಿಯ ದಿನೇಶ್ ಕಾರ್ತಿಕ್ 254 ನಂತರದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಆರ್‌ಸಿಬಿ ಪರವಾಗಿ ಸತತವಾಗಿ ರನ್ ಗಳಿಸುತ್ತಿದ್ದಾರೆ. ಆದರೆ, ಐಪಿಎಲ್ ಟ್ರೋಫಿ 16 ವರ್ಷಗಳಿಂದ ಕಣ್ಣಾ ಮುಚ್ಚಾಲೆ ಆಡುತ್ತಿದೆ. ದೆಹಲಿ ಮೂಲದ ಆಟಗಾರ ಕೊಹ್ಲಿ ಆಧುನಿಕ ಕ್ರಿಕೆಟ್ನ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ.