ಶ್ರೀನಗರ: ಶ್ರೀನಗರದ ಅವಳಿಗಳಾದ ಅಯೀರಾ ಚಿಸ್ತಿ ಮತ್ತು ಅನ್ಸಾ ಚಿಸ್ತಿ ಮಾಸ್ಕೋದಲ್ಲಿ ನಡೆದ ಪ್ರತಿಷ್ಠಿತ ರಷ್ಯಾದ ಮಾಸ್ಕೋ ಸ್ಟಾರ್ಸ್ ವುಶು ಇಂಟರ್ ನ್ಯಾಷನಲ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಫೆಬ್ರವರಿ 28 ರಿಂದ ಮಾರ್ಚ್ 5 ರವರೆಗೆ ನಡೆದ ಚಾಂಪಿಯನ್ ಶಿಪ್ನಲ್ಲಿ ಸಹೋದರಿಯರು ತಮ್ಮ 52 ಮತ್ತು 56 ಕೆಜಿ ತೂಕದ ವಿಭಾಗಗಳಲ್ಲಿ ಅಸಾಧಾರಣ ಕೌಶಲ್ಯ ಮತ್ತು ದೃಢತೆ ಪ್ರದರ್ಶಿಸಿದ್ದಾರೆ.
ಮಾರ್ಷಲ್ ಪರಾಕ್ರಮದ ಅದ್ಭುತ ಪ್ರದರ್ಶನದಲ್ಲಿ, ಅಯೀರಾ ಮತ್ತು ಅನ್ಸಾ ಫೈನಲ್ನಲ್ಲಿ ರಷ್ಯಾದ ಕ್ರೀಡಾಪಟುಗಳನ್ನು ಸೋಲಿಸಿ, ತಮ್ಮ ವಿಭಾಗಗಳಲ್ಲಿ ಅಗ್ರ ಸ್ಥಾನಗಳನ್ನು ಪಡೆದರು. ಈ ಗೆಲುವು ಅಯೀರಾ ಅವರ ಗೆಲುವಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದೆ. ಇದು ಅಯೀರಾ ಅವರ ಮೂರನೇ ಅಂತಾರಾಷ್ಟ್ರೀಯ ಚಿನ್ನದ ಪದಕವಾಗಿದೆ.
ಅವರು ಈ ಹಿಂದೆ ಜಾರ್ಜಿಯಾದಲ್ಲಿ ಚಿನ್ನ ಮತ್ತು ಇಂಡೋನೇಷ್ಯಾದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಜಾಗತಿಕ ವೇದಿಕೆಯಲ್ಲಿ ಅಯೀರಾ ಅವರ ನಿರಂತರ ಯಶಸ್ಸು ಪರಿಗಣಿಸಿದ ರಾಜ್ಯ ಸರ್ಕಾರ ಕೂಡ ಅಯೀರಾ ಅವರಿಗೆ ಕಳೆದ ವರ್ಷ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಗೌರವ ಪಡೆದ ರಾಜ್ಯದ ಮೊದಲ ಮಹಿಳಾ ವುಶು ಕ್ರೀಡಾಪಟು ಎಂಬ ಐತಿಹಾಸಿಕ ಸಾಧನೆಗೆ ಅಯೀರಾ ಪಾತ್ರರಾಗಿದ್ದಾರೆ.
ಜಾರ್ಜಿಯಾ ಇಂಟರ್ ನ್ಯಾಷನಲ್ ವುಶು ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅನ್ಸಾ ತನ್ನ ಸಹೋದರಿಯ ಹೆಜ್ಜೆಯಲ್ಲೇ ಸಾಗಿದ್ದಾರೆ. ಇದು ಅನ್ಸಾ ಅವರ ಎರಡನೇ ಅಂತಾರಾಷ್ಟ್ರೀಯ ಪದಕವಾಗಿದೆ. ರಷ್ಯಾದ ಮಾಸ್ಕೋ ಸ್ಟಾರ್ಸ್ ವುಶು ಇಂಟರ್ ನ್ಯಾಷನಲ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಜಯಿಸಿರುವುದು ಅವರ ಬೆಳೆಯುತ್ತಿರುವ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ.
ಚಿಸ್ತಿ ಸಹೋದರಿಯರು ದೀರ್ಘಕಾಲದಿಂದ ರಾಷ್ಟ್ರೀಯ ವುಶು ಕ್ರೀಡಾಕೂಟದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಇಬ್ಬರೂ ತಮ್ಮ ತೂಕ ವಿಭಾಗಗಳಲ್ಲಿ ರಾಷ್ಟ್ರೀಯ ಚಾಂಪಿಯನ್ಸ್ ಎಂಬ ಖ್ಯಾತಿ ಹೊಂದಿದ್ದಾರೆ. ರಾಷ್ಟ್ರೀಯ ಚಾಂಪಿಯನ್ ಶಿಪ್ಗಳಲ್ಲಿ ಅವರ ಗಮನಾರ್ಹ ಟ್ರ್ಯಾಕ್ ರೆಕಾರ್ಡ್ ಅನೇಕ ಪದಕಗಳನ್ನು ಒಳಗೊಂಡಿದೆ. ಇದು ದೇಶದ ಪ್ರಮುಖ ಸಮರ ಕಲೆಗಳ ಕ್ರೀಡಾಪಟುಗಳಾಗಿ ಅವರ ಸ್ಥಾನಮಾನ ಮತ್ತಷ್ಟು ಗಟ್ಟಿಗೊಳಿಸಿದೆ.
"ಮಾಸ್ಕೋದಲ್ಲಿನ ಗೆಲುವು ಪ್ರತಿಭಾವಂತ ಸಹೋದರಿಯರಿಗೆ ವೈಯಕ್ತಿಕ ಖ್ಯಾತಿ ತಂದು ಕೊಟ್ಟಿದೆ ಮತ್ತು ಅವರ ಗೆಲುವು ಕಾಶ್ಮೀರದ ಕ್ರೀಡಾಪಟುಗಳ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಈ ಸಾಧನೆಯು ಜಮ್ಮು ಮತ್ತು ಕಾಶ್ಮೀರದ ಸಮಸ್ತ ಜನತೆಗೆ ಹೆಮ್ಮೆಯಾಗಿದೆ." ಎಂದು ಅವರ ತಂದೆ ರಯೀಸ್ ಚಿಸ್ತಿ ಹೇಳಿದರು. ತಮ್ಮ ಕುಟುಂಬ, ತರಬೇತುದಾರರು ಮತ್ತು ಸಮುದಾಯದಿಂದ ಸಿಕ್ಕ ಬೆಂಬಲಕ್ಕಾಗಿ ಅವಳಿ ಸಹೋದರಿಯರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅವರಿಲ್ಲದೇ ಭಾರತ ಗೆಲ್ಲುತ್ತಿರಲಿಲ್ಲ ಎಂದು ಭಾವಿಸುವವರಿಗೆ ಇದೊಂದು ಎಚ್ಚರಿಕೆ: ಸುನಿಲ್ ಗವಾಸ್ಕರ್