ನವದೆಹಲಿ: ಮುಂದಿನ ತಿಂಗಳು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆಯ ಲೋನ್ ವುಲ್ವ್ಸ್ ಬೆದರಿಕೆ ಹಾಕಿದೆ ಎಂದು ಅಮೆರಿಕದ ಪೊಲೀಸರು ತಿಳಿಸಿದ್ದಾರೆ.
ಐಸಿಸ್ ಉಗ್ರ ಸಂಘಟನೆ ಭಾರತ ಮತ್ತು ಪಾಕಿಸ್ತಾನ ನಡುವಿನ ಒಂದ್ಯದ ದಿನದಂದು ದಾಳಿ ಮಾಡುವುದಾಗಿ ಬೆದರಿಕೆ ವಿಡಿಯೋ ಹೇಳಿಕೆಯ ಸಂದೇಶವನ್ನು ಪ್ರಸಾರ ಮಾಡಿದೆ ಎಂದು ಪೊಲೀಸ್ ಅಧಿಕಾರಿ ಪ್ಯಾಟ್ರಿಕ್ ರೈಡರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್, ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಬೆದರಿಕೆ ಕರೆ ಬಂದ ನಂತರ ಮುಂಜಾಗ್ರತ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲು ನ್ಯೂಯಾರ್ಕ್ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಜನರ ಸುರಕ್ಷತೆ ಮತ್ತು ಪಂದ್ಯ ಸುಗಮವಾಗಿ ನಡೆಸುವುದು ನಮ್ಮ ಮೊದಲ ಆದ್ಯತೆ ಆಗಿದೆ. ಇದಕ್ಕಾಗಿ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಂತರ ನ್ಯೂಯಾರ್ಕ್ ನಗರದ ಗಡಿಯಲ್ಲಿರುವ ನಸ್ಸೌ ಕೌಂಟಿಯ ಮುಖ್ಯಸ್ಥ ಬ್ರೂಸ್ ಬ್ಲೇಕ್‌ಮ್ಯಾನ್ ಪ್ರತಿಕ್ರಿಯಿಸಿ, 'ನಾವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ. ಅಲ್ಲದೇ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ತೆಗೆದುಕೊಳ್ಳಲಾಗುತ್ತಿದೆ. ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಜೂ.9 ರಂದು ಇಲ್ಲಿಯ ಐಸನೋವಾರ್ ಪಾರ್ಕ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಲಿವೆ. ಉಳಿದಂತೆ ಜೂನ್ 3 ರಿಂದ 12ರ ವರೆಗೆ ಮೈದಾನದಲ್ಲಿ ಒಟ್ಟು 8 ಪಂದ್ಯಗಳು ಜರುಗಲಿವೆ.