ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ನೆದರ್ಲೆಂಡ್ಸ್ ತಂಡವನ್ನು 25 ರನ್‌ಗಳಿಂದ ಸೋಲಿಸುವ ಮೂಲಕ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಡಿ ಗುಂಪಿನ ಬಾಂಗ್ಲಾದೇಶ ಸೂಪರ್ 8 ತಲುಪುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಡಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಈಗಾಗಲೇ ಸೂಪರ್-8ಕ್ಕೆ ಅರ್ಹತೆ ಪಡೆದುಕೊಂಡಿದೆ. ಇದೀಗ ಬಾಂಗ್ಲಾ ಎರಡನೇ ತಂಡವಾಗಿ ಮುಂದಿನ ಸುತ್ತಿಗೆ ಪ್ರವೇಶಿಸಲು ಮುಂಚೂಣಿಯಲ್ಲಿದೆ.
ಸೇಂಟ್ ವಿನ್ಸೆಂಟ್ನ ಅರೊನ್ಸ್ ವಾಲೆ ಗ್ರೌಂಡ್ನಲ್ಲಿ ಗುರುವಾರ ನಡೆದ ನೆದರ್ಲೆಂಡ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ ಸೂಪರ್ 8 ಹಂತಕ್ಕೆ ಅರ್ಹತೆಯ ಹೊಸ್ತಿಲಿಗೆ ಬಂದಿದೆ. ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ಗುಂಪಿನಿಂದ 2ನೇ ಅರ್ಹತಾ ಸ್ಥಾನಕ್ಕಾಗಿ ರೇಸ್‌ನಲ್ಲಿದ್ದರೆ, ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳಿಂದ ಮೂರು ಗೆಲುವುಗಳೊಂದಿಗೆ ಸೂಪರ್ 8 ತಲುಪಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಾಂಗ್ಲಾ ಪ್ರಸ್ತುತ 3 ಪಂದ್ಯಗಳ ಪೈಕಿ 2ರಲ್ಲಿ ಗೆದ್ದು 4 ಅಂಕ ಸಂಪಾದಿಸಿದೆ. ಸೋತರೂ ನೆದರ್ಲೆಂಡ್ಸ್ ತಂಡಕ್ಕೆ ಇನ್ನೂ ಅವಕಾಶ ಇದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ಉತ್ತಮ ಮೊತ್ತ ಕಲೆ ಹಾಕಿತು. ಶಕೀಬ್ ಅಲ್ ಹಸನ್ (46 ಎಸೆತ) ಅವರ ಅಜೇಯ 64 ರನ್ಗಳ ನೆರವಿನಿಂದ ಬಾಂಗ್ಲಾದೇಶ ತನ್ನ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ಬ್ಯಾಟಿಂಗ್ನಲ್ಲೂ ವಿಫಲವಾಯಿತು. 20 ಓವರ್ ಬ್ಯಾಟಿಂಗ್ ಮಾಡಿದರೂ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಯಿತು.
ಅಗ್ರ ಕ್ರಮಾಂಕದ ಐದು ಬ್ಯಾಟ್ಸ್‌ಮನ್‌ಗಳು ಎರಡು ಅಂಕಗಳನ್ನು ತಲುಪುವಲ್ಲಿ ಯಶಸ್ವಿಯಾದ ನೆದರ್ಲೆಂಡ್ಸ್‌ನ ಬ್ಯಾಟಿಂಗ್, ಪಂದ್ಯವನ್ನು ದೀರ್ಘಾವಧಿಯವರೆಗೆ ಸಮತೋಲನದಲ್ಲಿಟ್ಟರು. ಆದರೆ, ಕ್ರಮೇಣ ಒತ್ತಡಕ್ಕೆ ಸಿಲುಕಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಅದರ ಫಲವಾಗಿ ನೀಡಿದ ಗುರಿಯನ್ನು ಮುಟ್ಟದೇ ಸೋಲು ಒಪ್ಪಿಕೊಂಡಿತು. ಆರಂಭಿಕರಾದ ಮೈಕೆಲ್ ಲೆವಿಟ್ 18, ಮ್ಯಾಕ್ಸ್ ಓಡೌಡ್ 12 ರನ್ ಗಳಿಸಿದರೆ, ಬಳಿಕ ಕಣಕ್ಕಿಳಿದ ವಿಕ್ರಮಜಿತ್ ಸಿಂಗ್ 26, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 33, ನಾಯಕ ಸ್ಕಾಟ್ ಎಡ್ವರ್ಡ್ಸ್ 25 ರನ್ ಕಲೆ ಹಾಕಿ ತಂಡಕ್ಕೆ ನೆರವಾಗಲು ಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಆ ನಂತರ ಬಾಸ್ ಡಿ ಲೀಡೆ 0, ಲೋಗನ್ ವಾನ್ ಬೀಕ್ 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಆರ್ಯನ್ ದತ್ ಅಜೇಯ 15 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಡಚ್ ತಂಡದ ಹೋರಾಟ ಅಂತ್ಯಗೊಂಡಿತು. ಬಾಂಗ್ಲಾ ಪರ ರಿಶಾದ್ ಹೊಸೈನ್ 33 ರನ್ ನೀಡಿ 3 ವಿಕೆಟ್ ಪಡೆದರೆ ಮತ್ತು ತಸ್ಕಿನ್ ಅಹ್ಮದ್ 30 ರನ್ ಕೊಟ್ಟು 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಶಕೀಬ್ ಅಲ್ ಹಸನ್ ಅವರ ಅದ್ಭುತ ಇನ್ನಿಂಗ್ಸ್‌ನಿಂದ 159 ರನ್ ಗಳಿಸಿತು. ಆರಂಭಿಕ 3 ಓವರ್ಗಳಲ್ಲೇ ತನ್ನ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾಗೆ ಶಕೀಬ್ ಅವರ (64) ಅರ್ಧ ಶತಕವು ತಂಡವನ್ನು ಗೆಲುವಿನ ದಡಕ್ಕೆ ಕರೆತಂದಿತು. ತಂಜೀದ್ ಹಸನ್ (35), ಮಹಮ್ಮದುಲ್ಲಾ (25) ಮತ್ತು ಜಖರ್ ಅಲಿ 14 (ಔಟಾಗದೆ) ತಮ್ಮದೇ ಆದ ಕೊಡುಗೆ ನೀಡಿ ತಂಡಕ್ಕೆ ಆಸರೆಯಾದರು. 74 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಶಕೀಬ್ 46 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ ಅಜೇಯ 64 ರನ್ ಸಿಡಿಸಿದರು. ನೆದರ್ಲೆಂಡ್ಸ್ ಪರ ಆರ್ಯನ್ ದತ್ ಮತ್ತು ಪಾಲ್ ವ್ಯಾನ್ ಮೀಕೆರೆನ್ ತಲಾ 2 ವಿಕೆಟ್ ಪಡೆದರು. ಟಿಮ್ ಪ್ರಿಂಗಲ್ 1 ವಿಕೆಟ್ ಉರುಳಿಸಿ ಮಿಂಚಿದರು.
ಇದನ್ನೂ ಓದಿ: ರಿಯಾಸಿ ಉಗ್ರ ದಾಳಿ ಖಂಡಿಸಿದ ಪಾಕ್ ಕ್ರಿಕೆಟಿಗ ಹಸನ್ ಅಲಿ, ಅವರ ಪತ್ನಿ; ಭಾರತೀಯರಿಂದ ಪ್ರಶಂಸೆ - Hasan Ali