ನವದೆಹಲಿ: ಕ್ರಿಕೆಟ್ನ ರಸದೌತಣ ನೀಡುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡುವೆ ಮತ್ತೊಂದು ಐಪಿಎಲ್ ಶುರುವಾಗುತ್ತಿದೆ. ಅಂಧರ ಕ್ರಿಕೆಟ್ನಂತೆ ಕಿವುಡರ ಇಂಡಿಯನ್ ಪ್ರೀಮಿಯರ್ ಲೀಗ್ ಏಪ್ರಿಲ್ 16ರಿಂದ 19ರವರೆಗೆ ನಾಲ್ಕು ದಿನಗಳ ಕಾಲ ಜಮ್ಮುವಿನಲ್ಲಿ ನಿಗದಿಯಾಗಿದೆ.
ಅಂಧರ ಕ್ರಿಕೆಟ್ ಅನ್ನು ಪ್ರೋತ್ಸಾಹಿಸಿದಂತೆ ಕಿವುಡರ ಕ್ರಿಕೆಟ್ ಅನ್ನೂ ಬೆಳೆಸಲು ಸೈರಸ್ ಪೂನಾವಾಲಾ ಗ್ರೂಪ್ ಕಂಪನಿಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಹಯೋಗದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
16ರಿಂದ ಆರಂಭವಾಗಲಿರುವ 'ಟಿ20 ಡೆಫ್ ಇಂಡಿಯನ್ ಪ್ರೀಮಿಯರ್ ಲೀಗ್'ನಲ್ಲಿ 8 ಶ್ರವಣದೋಷವುಳ್ಳ ಪುರುಷರ ಕ್ರಿಕೆಟ್ ತಂಡಗಳು ಸ್ಪರ್ಧಿಸಲಿವೆ. ಫೈನಲ್ ಸೇರಿದಂತೆ ಒಟ್ಟು 14 ಪಂದ್ಯಗಳು ನಡೆಯಲಿವೆ ಎಂದು ಭಾರತೀಯ ಕಿವುಡರ ಕ್ರಿಕೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ನಾಲ್ಕು ದಿನಗಳ ನಡೆಯುವ ಪಂದ್ಯಾವಳಿಯು ಮಂಗಳವಾರ ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಉದ್ಘಾಟಣೆಯಾಗಲಿದೆ. ಟೂರ್ನಿಯಲ್ಲಿ ಚಾಂಪಿಯನ್ ತಂಡಕ್ಕೆ 2 ಲಕ್ಷ ರೂಪಾಯಿ, ರನ್ನರ್ ಅಪ್ ತಂಡಕ್ಕೆ 1 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮತ್ತು ಸೂಪರ್ ಸಿಕ್ಸರ್ ವಿಭಾಗಗಳಲ್ಲಿ ವೈಯಕ್ತಿಕ ನಗದು ಬಹುಮಾನವೂ ಇರಲಿದೆ.
ಪಾಲ್ಗೊಳ್ಳುವ ತಂಡಗಳು: ಪಂಜಾಬ್ ಲಯನ್ಸ್, ರಾಜಸ್ಥಾನ್ ರಾಯಲ್ಸ್, ಕೊಚ್ಚಿ ಟಸ್ಕರ್ಸ್, ಡೆಲ್ಲಿ ಬುಲ್ಸ್, ಕೋಲ್ಕತ್ತಾ ವಾರಿಯರ್ಸ್, ಚೆನ್ನೈ ಬ್ಲಾಸ್ಟರ್ಸ್, ಹೈದರಾಬಾದ್ ಈಗಲ್ಸ್ ಮತ್ತು ಬೆಂಗಳೂರು ಬಾದ್‌ಶಾಸ್ ಫ್ರಾಂಚೈಸಿಗಳು ತಂಡ ರಚಿಸಿಕೊಂಡಿವೆ.
ಇದನ್ನೂ ಓದಿ: ಗುಜರಾತ್ಗೆ ಶರಣಾದ ರಾಜಸ್ಥಾನ: ಸಂಜು ಸಾಮ್ಸನ್ ಪಡೆಗೆ ಮೊದಲ ಸೋಲು - IPL 2024