ಬಾಸೆಲ್ (ಸ್ವಿಟ್ಜರ್ಲ್ಯಾಂಡ್): 16 ತಿಂಗಳು, 8 ಟೂರ್ನಿ, ಸತತ ಸೋಲು; ಇದು ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಕಿದಂಬಿ ಶ್ರೀಕಾಂತ್ ಅವರ ರೆಕಾರ್ಡ್. ಇಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಸೋಲುವ ಮೂಲಕ ಭಾರತದ ಅಭಿಯಾನ ಕೂಡ ಅಂತ್ಯವಾಯಿತು.
ಸತತ ಪ್ರಯತ್ನದ ಬಳಿಕ 8 ಟೂರ್ನಿಗಳಲ್ಲಿ ಮೊದಲ ಬಾರಿಗೆ ನಾಲ್ಕರಘಟ್ಟಕ್ಕೆ ಬಂದಿದ್ದ ಶ್ರೀಕಾಂತ್ ಚೈನೀಸ್ ತೈಪೆಯ ಲಿನ್ ಚುನ್ ಯಿ ವಿರುದ್ಧ ನಿರಾಸೆ ಅನುಭವಿಸಿದರು. ಶನಿವಾರ ರಾತ್ರಿ 1 ಗಂಟೆ ಮತ್ತು 5 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಮಾಜಿ ವಿಶ್ವದ ನಂಬರ್ 1 ಆಟಗಾರ 21-15, 9-21, 18-21 ರಿಂದ ಪರಾಜಯ ಕಂಡರು.
ಕೊನೆಯದಾಗಿ ಕಿದಂಬಿ ಶ್ರೀಕಾಂತ್ 2022 ರಲ್ಲಿ ಜರ್ಮನಿಯಲ್ಲಿ ನಡೆದಿದ್ದ ಹೈಲೋ ಓಪನ್ನಲ್ಲಿ ಸೆಮಿಫೈನಲ್ ತಲುಪಿದ್ದರು. ಇದಾದ ಬಳಿಕ ಆಡಿದ 8 ವಿವಿಧ ಟೂರ್ನಿಗಳಲ್ಲಿ ಸೆಮೀಸ್ಗೆ ಬರಲು ಪರದಾಡಿದ್ದರು. ವಿಶೇಷವೆಂದರೆ ಕ್ವಾರ್ಟರ್ಫೈನಲ್ನಲ್ಲಿ ಚೀನಾದ ಆಟಗಾರನನ್ನು ಸೋಲಿಸಿ ನಾಲ್ಕಘಟ್ಟಕ್ಕೆ ಬಂದಿದ್ದರು.
ಮೊದಲ ಗೇಮ್ ಅನ್ನು 21-15 ರಲ್ಲಿ ಕೊನೆಗೊಳಿಸಿದ ಶ್ರೀಕಾಂತ್, ಎರಡನೇ ಗೇಮ್‌ನಲ್ಲಿ 4-1 ಮುನ್ನಡೆ ಸಾಧಿಸಿದರು. ಇದನ್ನೇ ಮುಂದುವರಿಸಿಕೊಂಡು ಹೋದ ಭಾರತೀಯ ಷಟ್ಲರ್ ಭರ್ಜರಿ ತಿರುಗೇಟು ನೀಡಿ 9-21 ರಲ್ಲಿ ಗೇಮ್ ಗೆದ್ದರು. ಇನ್ನು ಕೊನೆಯ ಮತ್ತು ಅಂತಿಮ ಗೇಮ್‌ನಲ್ಲಿ ಸಮಬಲದ ಹೋರಾಟ ಕಂಡುಬಂದರೂ, ಕೊನೆಯಲ್ಲಿ ಪ್ರಾಬಲ್ಯ ಮೆರೆದ ಚೀನಿ ಆಟಗಾರ 18-21 ರಲ್ಲಿ ಗೇಮ್ ಗೆದ್ದು ಫೈನಲ್ಗೇರಿದರು.
2021 ರ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಆಟದಲ್ಲಿ ಕೆಲ ದೋಷಗಳು ಕಂಡುಬಂದವು. ನಿಖರ ದಾಳಿ ಮತ್ತು ರಿಟರ್ನ್ನಲ್ಲಿ ಹಲವು ಬಾರಿ ಎಡವಿದರು.
ಭಾರತದ ಇನ್ನೊಬ್ಬ ಉದಯೋನ್ಮುಖ ಆಟಗಾರ ಪ್ರಿಯಾಂಶು ರಾಜಾವತ್ ಕೂಡ ಕ್ವಾರ್ಟರ್ಫೈನಲ್ನಲ್ಲಿ ಹೊರಬಿದ್ದರು. ಅವರು ಜಾಕೋಬ್‌ಶಲ್ಲೆ ಕ್ರೀಡಾಂಗಣದಲ್ಲಿ 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 15–21, 19–21ರಲ್ಲಿ ಚೌ ಟಿಯೆನ್ ಚೆನ್ ಎದುರು ಸೋತರು.
ಇದನ್ನೂ ಓದಿ: ಐಪಿಎಲ್: ಕಡಿಮೆ ಎಸೆತದಲ್ಲಿ 200 ಸಿಕ್ಸರ್ ಬಾರಿಸಿ ಕ್ರಿಸ್ ಗೇಲ್ ದಾಖಲೆ ಮುರಿದ ಆ್ಯಂಡ್ರ್ಯೂ ರಸ್ಸೆಲ್ - ipl 2024