ಕೊಲಂಬೊ(ಶ್ರೀಲಂಕಾ): ಅವಿಷ್ಕಾ ಫರ್ನಾಂಡೋ ಭರ್ಜರಿ ಬ್ಯಾಟಿಂಗ್, ದುನಿತ್ ವೆಲ್ಲಲಗೆ ಸ್ಪಿನ್ ಜಾದೂಗೆ ಸಿಲುಕಿದ ಭಾರತ, ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 110 ರನ್ಗಳ ಸೋಲು ಕಂಡಿತು. ಈ ಮೂಲಕ ಲಂಕಾ ಪಡೆ 3 ಪಂದ್ಯಗಳ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿತು. ಮೊದಲ ಏಕದಿನ ಪಂದ್ಯ ಟೈ ಆಗಿತ್ತು.
ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡಿತು. ಸ್ಪಿನ್ಗೆ ನೆರವಾಗುತ್ತಿದ್ದ ಪಿಚ್ನಲ್ಲಿ ಭಾರತೀಯ ಬ್ಯಾಟರ್ಗಳು ತರಗಲೆಯಂತೆ ಉದುರಿದರು. ಈ ಮೂಲಕ 27 ವರ್ಷಗಳ ಬಳಿಕ ಅಂದರೆ, 1997ರ ನಂತರ ಲಂಕಾ ನೆಲದಲ್ಲಿ ಏಕದಿನ ಸರಣಿ ಸೋಲಿನ ಮುಖಭಂಗ ಅನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 7 ವಿಕೆಟ್ಗೆ 248 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ 26.1 ಓವರ್ಗಳಲ್ಲಿ 138 ರನ್ಗೆ ಆಲೌಟ್ ಆಗಿ 110 ರನ್ಗಳಿಂದ ಚರಿತ ಅಸಲಂಕಾ ಪಡೆಯ ಮುಂದೆ ಮಂಡಿಯೂರಿತು.
ಭಾರತದ ಪೆವಿಲಿಯನ್ ಪರೇಡ್: ಮಹೇಶ್ ತೀಕ್ಷಣ, ದುನಿತ್ ವೆಲ್ಲಲಗೆ, ಜೆಫ್ರಿ ವಂಡೆರ್ಸೆ ಸ್ಪಿನ್ ದಾಳಿಗೆ ನಲುಗಿದ ಭಾರತದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕ ಮತ್ತು ತಂಡದ ನಾಯಕ ರೋಹಿತ್ ಶರ್ಮಾ ತುಸು ಹೊತ್ತು ಅಬ್ಬರಿಸಿ 35 ರನ್ ಗಳಿಸಿದರು. ಇದೇ ತಂಡದ ಬ್ಯಾಟರ್ನ ಅಧಿಕ ಮೊತ್ತ. ವಿರಾಟ್ ಕೊಹ್ಲಿ ಮತ್ತೆ ವೈಫಲ್ಯ ಕಂಡ 20, ವಾಷಿಂಗ್ಟನ್ ಸುಂದರ್ ಕೊನೆಯಲ್ಲಿ 30, ರಿಯಾನ್ ಪರಾಗ್ 15 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟರ್ಗಳು ಒಂದಂಕಿಗೆ ವಿಕೆಟ್ ನೀಡಿದರು.
Sri Lanka win the Third ODI and the series 2-0.
— BCCI (@BCCI) August 7, 2024
Scorecard ▶️ https://t.co/Lu9YkAmnek#TeamIndia | #SLvIND pic.twitter.com/ORqj6aWvRW
ತ್ರಿವಳಿ ಸ್ಪಿನ್ನರ್ಗಳ ಜಾದು: ಲಂಕಾದ ತ್ರಿವಳಿ ಸ್ಪಿನ್ನರ್ಗಳಾದ ಮಹೇಶ್ ತೀಕ್ಷಣ, ದುನಿತ್ ವೆಲ್ಲಲಗೆ, ಜೆಫ್ರಿ ವಂಡೆರ್ಸೆ ಸ್ಪಿನ್ ಜಾದು ಮಾಡಿದರು. ಮೂವರು ಸೇರಿ ಪಂದ್ಯದಲ್ಲಿ 9 ವಿಕೆಟ್ ಪಡೆದರು. ಅಸಿತ ಫೆರ್ನಾಂಡೋ 1 ವಿಕೆಟ್ ಕಿತ್ತರು. ಅದರಲ್ಲಿ ದುನಿತ್ ವೆಲ್ಲಲಗೆ ಮತ್ತೊಮ್ಮೆ ಮಾರಕವಾಗಿ, ಪರಿಣಮಿಸಿದರು. 5 ಓವರ್ಗಳಲ್ಲಿ 27 ರನ್ ನೀಡಿ 5 ವಿಕೆಟ್ ಕಬಳಿಸಿದರು. ತೀಕ್ಷಣ ಮತ್ತು ವಂಡೆರ್ಸೆ ತಲಾ 2 ವಿಕೆಟ್ ಕಿತ್ತು ಭಾರತದ ಅಂತ್ಯಕ್ಕೆ ಕಾರಣವಾದರು.
ಶತಕ ತಪ್ಪಿಸಿಕೊಂಡ ಫರ್ನಾಂಡೊ: ಇದಕ್ಕೂ ಮೊದಲು ಕಠಿಣ ಪಿಚ್ನಲ್ಲೂ ಉತ್ತಮ ಬ್ಯಾಟಿಂಗ್ ಮಾಡಿದ ಆತಿಥೇಯ ಲಂಕಾ ಮೊದಲ ವಿಕೆಟ್ಗೆ ಉತ್ತಮ ಜೊತೆಯಾಟವಾಡಿತು. ಆರಂಭಿಕರಾದ ಪಥುಮ್ ನಿಸ್ಸಂಕಾ, ಅವಿಷ್ಕಾ ಫೆರ್ನಾಂಡೋ 89 ರನ್ ಗಳಿಸಿದರು. ಪಥುಮ್ ನಿಸ್ಸಾಂಕಾ 65 ಎಸೆತಗಳಲ್ಲಿ 45 ರನ್, ಅವಿಷ್ಕಾ ಫೆರ್ನಾಂಡೋ 102 ಎಸೆತಗಳಲ್ಲಿ 96 ರನ್ ಗಳಿಸಿದರು. ಶತಕದ ಅಂಚಿನಲ್ಲಿದ್ದ ಫೆರ್ನಾಂಡೋ ರಿಯಾನ್ ಪರಾಗ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದು ಶತಕದಿಂದ ತಪ್ಪಿಸಿಕೊಂಡರು.
ನಿಸ್ಸಂಕಾ ಔಟಾದ ಬಳಿಕ ಕುಸಾಲ್ ಮೆಂಡಿಸ್ ರನ್ ಗತಿ ಏರಿಸಿದರು. 82 ಎಸೆತಗಳಲ್ಲಿ 59 ರನ್ ಮಾಡಿದರು. ಇದರಿಂದ ತಂಡ 37 ಓವರ್ಗಳಲ್ಲಿ 183 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಇಬ್ಬರೂ ಔಟಾದ ಬಳಿಕ ತಂಡ ದಿಢೀರ್ ಕುಸಿತ ಕಂಡಿತು. ಕೊನೆಯಲ್ಲಿ 248 ರನ್ಗಳ ಸವಾಲು ನೀಡಿತು.
ಇದನ್ನೂ ಓದಿ: ಸೆಮೀಸ್ ಬಳಿಕ 2.7 ಕೆಜಿ ಹೆಚ್ಚಿದ ವಿನೇಶ್, ಕೂದಲು ಕತ್ತರಿಸಿದರೂ ತಗ್ಗದ ತೂಕ: ವೈದ್ಯಾಧಿಕಾರಿ - Vinesh Phogat